ತುಮುಲ್ ಚುನಾವಣೆ ಫಲಿತಾಂಶ ಪ್ರಕಟ-ಕಾಂಗ್ರೆಸ್ ಮೇಲುಗೈ
ತುಮಕೂರು : ತೀವ್ರ ಕುತೂಹಲ ಮೂಡಿಸಿದ್ದ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕರ ಸ್ಥಾನಗಳಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದೆ.
ತುಮಕೂರು ನಗರದ ತಾಲ್ಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ ಸಮಕ್ಷದಲ್ಲಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಿ 10 ಗಂಟೆ ವೇಳೆಗೆ ಸಂಪೂರ್ಣ ಫಲಿತಾಂಶ ಪ್ರಕಟವಾಯಿತು.
ತುಮಕೂರು ಗ್ರಾಮಾಂತರ, ತಿಪಟೂರು, ಮಧುಗಿರಿ, ಪಾವಗಡ ಹಾಗೂ ಗುಬ್ಬಿ ಸೇರಿ 5 ತಾಲೂಕುಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಕುಣಿಗಲ್, ಸಿರಾ, ಕೊರಟಗೆರೆ ತಾಲ್ಲೂಕಿನಿಂದ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ತುರುವೇಕೆರೆ ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕಿನಿಂದ ಸ್ವತಂತ್ರ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ತುಮಕೂರು ಜಿಲ್ಲಾ ಹಾಲು ಉತ್ಪಾದಕರ ಸಂಘಕ್ಕೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಒಟ್ಟು 10 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ತುಮಕೂರು ತಾಲ್ಲೂಕು ಮತಕ್ಷೇತ್ರಕ್ಕೆ ಎಚ್.ಎಂ.ನಂಜೇಗೌಡ, ಮತ್ತು ಎಚ್.ಕೆ.ರೇಣುಕಾಪ್ರಸಾದ್ ಸ್ಪರ್ಧಿಸಿದ್ದರು. ಇವರ ಪೈಕಿ ಎಚ್ಎಂ.ನಂಜೇಗೌಡ 83 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
ಗುಬ್ಬಿ ಮತಕ್ಷೇತ್ರದಿಂದ ಚಂದ್ರಶೇಖರ್ ಜಿ ಮತ್ತು ಭಾರತೀದೇವಿ ಕೆ.ಪಿ. ಸ್ಪರ್ಧಿಸಿದ್ದರು. ಭಾರತೀದೇವಿ 68 ಮತಗಳನ್ನು ವಿಜಯಶಾಲಿಯಾಗಿದ್ದಾರೆ. ಪ್ರತಿಸ್ಪರ್ಧಿ ಚಂದ್ರಶೇಖರ್ 52 ಮತಗಳನ್ನು ಪಡೆದು ಸೋತಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನಿಂದ ಎಸ್.ರಾಜಶೇಖರ್ ಮತ್ತು ಬಿ.ಎನ್.ಶಿವಪ್ರಕಾಶ್ ಸ್ಪರ್ಧಿಸಿದ್ದು, ಬಿ.ಎನ್.ಶಿವಪ್ರಕಾಶ್ ಜಯಗಳಿಸಿದ್ದಾರೆ.
ತಿಪಟೂರು ಕ್ಷೇತ್ರದಿಂದ ತ್ರಿಯಂಬಕ ಮತ್ತು ಎಂ.ಕೆ.ಪ್ರಕಾಶ್ ಸ್ಪರ್ಧಿಸಿದ್ದು ಎಂ.ಕೆ.ಪ್ರಕಾಶ್ 105 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದಾರೆ. ತುರುವೇಕೆರೆ ತಾಲೂಕು ಮತಕ್ಷೇತ್ರದಿಂದ ಸ್ಪರ್ಧಿಸಿದ್ದ ಪಿ.ಟಿ.ಗಂಗಾಧರಯ್ಯ ಮತ್ತು ಸಿ.ವಿ.ಮಹಲಿಂಗಯ್ಯ ಪೈಕಿ ಸಿ.ವಿ.ಮಹಲಿಂಗಯ್ಯ 85 ಮತಗಳನ್ನು ಗಳಿಸಿ ಆಯ್ಕೆಯಾಗಿದ್ದಾರೆ. ಇವರ ಪ್ರತಿಸ್ಪರ್ಧಿ ಕೇವಲ 34 ಮತ ಪಡೆದು ಪರಾಭವಗೊಂಡಿದ್ದಾರೆ.
ಕುಣಿಗಲ್ ಕ್ಷೇತ್ರದಿಂದ ಡಿ.ಕೃಷ್ಣಕುಮಾರ್ ಆಯ್ಕೆಯಾಗಿದ್ದರೆ, ಇವರ ಪ್ರತಿಸ್ಪರ್ಧಿ ಕೆ.ಎಂ.ಮಾಸ್ತಿಗೌಡ ಸೋಲನ್ನು ಕಂಡಿದ್ದಾರೆ. ಮಧುಗಿರಿ ಕ್ಷೇತ್ರದಿಂದ ಬಿ.ನಾಗೇಶ್ ಬಾಬು ಅವರು 61 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕೊರಟಗೆರೆ ಕ್ಷೇತ್ರದಿಂದ ಸಿದ್ದಗಂಗಯ್ಯ ಪಿ.ಜಯಶಾಲಿಯಾಗಿದ್ದಾರೆ. ಸಿರಾ ತಾಲ್ಲೂಕು ಕ್ಷೇತ್ರದಿಂದ ಎಸ್.ಆರ್.ಗೌಡ ಆಯ್ಕೆಯಾಗಿದ್ದರೆ, ಪಾವಗಡದಿಂದ ಚಂದ್ರಶೇಖರ ರೆಡ್ಡಿ ಆಯ್ಕೆಯಾಗಿದ್ದಾರೆ.