ಗುಬ್ಬಿ | ʼಜೈ ಭೀಮ್ʼ ಹಾಡು ಹಾಕಿದ್ದಕ್ಕೆ ವಾಹನ ತಡೆದು ದಲಿತ ಯುವಕರ ಮೇಲೆ ಮಾರಣಾಂತಿಕ ಹಲ್ಲೆ; ಆರೋಪ
ಗುಬ್ಬಿ : ರಸ್ತೆಯಲ್ಲಿ ಸಂಚರಿಸುತ್ತಿದ್ದ ಹಾಲಿನ ಗಾಡಿಯಲ್ಲಿ ಕೇಳಿಬರುತ್ತಿದ್ದ ಅಂಬೇಡ್ಕರ್ ಅವರ ʼಜೈ ಭೀಮ್ʼ ಹಾಡು ಕೇಳಿ ಆಕ್ರೋಶಗೊಂಡು ರೈಲ್ವೆ ಪೊಲೀಸ್ ಸೇರಿದಂತೆ ಮತ್ತೊಬ್ಬ, ವಾಹನ ತಡೆದು ಈ ಹಾಡು ಹಾಕದಂತೆ ವಾಹನದಲ್ಲಿದ್ದ ದಲಿತ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಮರ್ಮಾಂಗಕ್ಕೆ ಗಂಭೀರವಾಗಿ ಹೊಡೆದು ಜೊತೆಗೆ ಜಾತಿ ನಿಂದನೆ ಮಾಡಿದ್ದಾರೆ ಎನ್ನಲಾದ ಘಟನೆ ಗುಬ್ಬಿ ತಾಲೂಕಿನ ಕಸಬಾ ಹೋಬಳಿಯ ಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಕಸಬಾ ಹೋಬಳಿ ಮುದ್ದನಹಳ್ಳಿ ಗ್ರಾಮದ ರೈಲ್ವೆ ಇಲಾಖೆಯ ಪೊಲೀಸ್ ಅಧಿಕಾರಿ ಚಂದ್ರಶೇಖರ್ ಮತ್ತು ಮತ್ತೊಬ್ಬ ವ್ಯಕ್ತಿ ನರಸಿಂಹರಾಜು ಎಂಬವರು ಜಾತಿ ನಿಂದನೆ ಮಾಡಿ ದಲಿತ ಯುವಕನ ಹಲ್ಲೆ ಮಾಡಿರುವ ವ್ಯಕ್ತಿಗಳು ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದ್ದು, ತುಮಕೂರು ಗ್ರಾಮಾಂತರದ ಸಿರಿವರ ಗ್ರಾಮದ ದಲಿತ ಸಮುದಾಯದ 19 ವರ್ಷದ ದೀಪು ಹಾಗೂ ನರಸಿಂಹ ಮೂರ್ತಿ ಹಲ್ಲೆಗೊಳಗಾದ ಯುವಕರು ಎನ್ನಲಾಗಿದೆ. ಹಲ್ಲೆಗೊಳಗಾದವರು ಗುಬ್ಬಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಶನಿವಾರ ಸಂಜೆ ಎಂದಿನಂತೆ ಹಾಲಿನ ವಾಹನ ಚಾಲನೆ ಮಾಡಿಕೊಂಡು ಇಬ್ಬರು ದಲಿತ ಸಮುದಾಯದ ಯುವಕರು ಸರಿಸುಮಾರು 6 ಗಂಟೆ ಸಮಯದಲ್ಲಿ ಕಸಬಾ ಹೋಬಳಿಯ ಮುದ್ದನಹಳ್ಳಿ ಗ್ರಾಮದ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ʼಜೈ ಭೀಮ್ʼ ಹಾಡು ಹಾಕಿಕೊಂಡು ಬರುತ್ತಿದ್ದರು ಎನ್ನಲಾಗಿದೆ. ಈ ವೇಳೆ ಇಬ್ಬರು ವ್ಯಕ್ತಿಗಳು ರಸ್ತೆಯಲ್ಲಿ ವಾಹನವನ್ನು ಅಡ್ಡಗಟ್ಟಿ ನೀವು ಯಾವ ಜಾತಿಯವರು ಎಂದು ಜಾತಿ ಹೆಸರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೊತೆಗೆ ಈ ಹಾಡು ಎಲ್ಲಿಯೂ ಹಾಕದಂತೆ ತಾಕೀತು ಮಾಡಿದ್ದಾರೆ. ಬಳಿಕ ಇಬ್ಬರನ್ನು ಎಳೆದಾಡಿ ಹಲ್ಲೆ ಮಾಡಿದ್ದು, ಇದರಲ್ಲಿ ಒಬ್ಬರ ಮರ್ಮಾಂಗಕ್ಕೆ ಗಂಭೀರ ಸ್ವರೂಪದ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ದಲಿತ ಯುವಕರು ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.