ತುಮಕೂರು | ಸರಕಾರಿ ಶಾಲೆಯ ಅಡುಗೆ ಕೋಣೆಯಲ್ಲಿ ಕುಕ್ಕರ್ ಸ್ಫೋಟ: ಇಬ್ಬರಿಗೆ ಗಾಯ
ತುಮಕೂರು: ಸರಕಾರಿ ಪ್ರೌಢಶಾಲೆಯ ಅಡುಗೆ ಕೋಣೆಯಲ್ಲಿ ಕುಕ್ಕರ್ ಸ್ಫೋಟಗೊಂಡು ಇಬ್ಬರು ಅಡುಗೆ ಸಿಬ್ಬಂದಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಪುರವರ ಗ್ರಾಮದಲ್ಲಿ ನಡೆದಿದೆ.
ಪುರವರ ಸರಕಾರಿ ಪ್ರೌಢಶಾಲೆಯ ಅಡುಗೆ ಕೋಣೆಯಲ್ಲಿ ಹೊಸ ವರ್ಷದ ಪ್ರಯುಕ್ತ ಶಾಲಾ ಮಕ್ಕಳಿಗೆ ಟೊಮೆಟೊ ಬಾತ್ ಹಾಗೂ ಹೆಸರುಬೇಳೆ ಪಾಯಸ ಸಿದ್ಧಪಡಿಸುವ ವೇಳೆ ಕುಕ್ಕರ್ ಸ್ಫೋಟಗೊಂಡಿದೆ. ಈ ವೇಳೆ ಸ್ಥಳದಲ್ಲಿದ್ದ ಅಡುಗೆ ಸಿಬ್ಬಂದಿ ಮೇಲೆ ನೀರು ಹಾಗೂ ಬೇಳೆ ಸಿಡಿದು ಉಮಾದೇವಿ ಗಂಭೀರಗೊಂಡಿದ್ದಾರೆ. ಸಹಾಯಕಿ ಜಯಮ್ಮ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ತಕ್ಷಣ ಗಾಯಾಳನ್ನು ಗೊಂದಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗ್ಯಾಸ್ ಸಿಲಿಂಡರ ಆಫ್ ಮಾಡಿ ಕುಕ್ಕರ್ ವಿಷಲ್ ತೆಗೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಜಯಮ್ಮ ಎಂಬುವರು ಚೇತರಿಸಿಕೊಂಡಿದ್ದು, ಯಾವುದೇ ರೀತಿ ಜೀವಕ್ಕೆ ಅಪಾಯವಿಲ್ಲ. ಈ ಬಗ್ಗೆ ತನಿಖೆ ಮಾಡಿದ ನಂತರ ಎಲ್ಲವೂ ತಿಳಿಯಲಿದೆ.