ಪಾವಗಡ | ಕುರಿಗಾಹಿಯನ್ನು ಹತ್ಯೆಗೈದು ಕುರಿಗಳ ಕಳ್ಳತನ : ಆರೋಪಿಯ ಬಂಧನ
ಪಾವಗಡ: ಬೆಟ್ಟದ ತಪ್ಪಲಿನಲ್ಲಿ ಮೇಕೆ ಮೇಯಿಸಲು ಹೋದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿ ಮೇಕೆಗಳನ್ನು ಹೊತ್ತೊಯ್ದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ದೇವಲಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಕೊಲೆಯಾದ ವ್ಯಕ್ತಿಯನ್ನು ತಾಲೂಕಿನ ದೇವಲಕೆರೆ ಗ್ರಾಮದ ಗ್ರಾಮ ಪಂಚಾಯ್ತಿಯ ಮಾಜಿ ಉಪಾಧ್ಯಕ್ಷ ನರಸಿಂಹಯ್ಯ ಎಂದು ತಿಳಿದುಬಂದಿದೆ.
ತಾಲ್ಲೂಕಿನ ಕೆ.ಟಿ. ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಲಕೆರೆ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಿಂಹಪ್ಪ ಗ್ರಾಮದ ಹೊರವಲಯದ ಬೆಟ್ಟದಲ್ಲಿ ಮೇಕೆಗಳನ್ನು ಮೇಯಿಸುವಾಗ ಪಕ್ಕದ ಕರಿಯಮ್ಮನಪಾಳ್ಯ ಗ್ರಾಮದ ಮಣಿಕಂಠ ಎಂಬಾತ ಕುಡುಗೋಲಿನಿಂದ ನರಸಿಂಹಪ್ಪ ಅವರನ್ನು ಬರ್ಬರವಾಗಿ ಕೊಲೆಗೈದು 30 ಮೇಕೆಗಳನ್ನು ಹೊಡೆದುಕೊಂಡು ಹೋಗಿದ್ದ ಎಂದು ಹೇಳಲಾಗಿದೆ.
ನಂತರ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಕುರಿಸಂತೆಯಲ್ಲಿ ಮಾರಾಟ ಮಾಡುತ್ತಿರುವಾಗ ನರಸಿಂಹಪ್ಪನ ಮಗ ಮಂಜುನಾಥ್ ಮೇಕೆಗಳನ್ನು ಗುರುತಿಸಿ ಮಣಿಕಂಠನನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದು, ಅರಸೀಕೆರೆ ಪೊಲೀಸರು, ಹಿರಿಯೂರಿನಲ್ಲಿ ಆರೋಪಿಯನ್ನು ಬಂಧಿಸಿ ಕರೆ ತಂದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.