ನಮ್ಮದು ಜನಪರವಾದ ಸರಕಾರ: ಗೃಹ ಸಚಿವ ಜಿ.ಪರಮೇಶ್ವರ್

Update: 2024-01-20 17:38 GMT

ತುಮಕೂರು:ಸಮಾಜದಲ್ಲಿ ನಾವು ಮಾಡಿದ ಉತ್ತಮ ಕೆಲಸಗಳಷ್ಟೇ ಜನಮಾನಸದಲ್ಲಿ ಉಳಿಯುತ್ತದೆ. ಹೀಗಾಗಿ ನಮ್ಮ ಸರಕಾರ ಜನಪರವಾದ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಪರಮೇಶ್ವರ್ ಹೇಳಿದ್ದಾರೆ.

ಮಧುಗಿರಿ ತಾಲೂಕಿನ ಕೋಡ್ಲಾಪುರ ಗ್ರಾಮ ಪಂಚಾಯತಿಯ ನೂತನ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸರಕಾರ ಚುನಾವಣೋತ್ತರದಲ್ಲಿ ನೀಡಿದ 5 ಯೋಜನೆ ಗಳಿಂದ 1000 ಕೋಟಿ ರೂ. ಜಿಲ್ಲೆಯಲ್ಲಿ ಖರ್ಚಾಗಿದೆ. ಜನರ ಕಷ್ಟಗಳನ್ನು ಸುಧಾರಿಸಬೇಕೆಂಬುದೇ ನಮ್ಮ ಸರ್ಕಾರದ ಉದ್ದೇಶ, ಮಧುಗಿರಿ ತಾಲೂಕಿನ ಕೊಡ್ಲಾಪುರ ಗ್ರಾಮದಲ್ಲಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಕ್ಕೆ 40 ಲಕ್ಷ ಅನುದಾನ ನೀಡಲಾಗಿದೆ ಮತ್ತು ಕೋಡ್ಲಾಪುರ ಗ್ರಾಮದಲ್ಲಿ 97 ಜನರಿಗೆ ನಿವೇಶನ ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಗಿದೆ ಎಂದರು.

ಕೋಡ್ಲಾಪುರ ಗ್ರಾಮದಲ್ಲಿ 1973ರಲ್ಲಿ ಕಟ್ಟಿದ ಶಾಲೆ ಇಂದು ಶಿಥಿಲಗೊಂಡಿರುವುದರಿಂದ ಪ್ರಾಥಮಿಕ ಶಾಲೆಗೆ ನೂತನ ಕಟ್ಟಡಕ್ಕೆ 1 ಕೋಟಿ ರೂ. ಹಣವನ್ನು ಮಂಜೂರು ಮಾಡಲಾಗಿದೆ. ಈ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ, 14 ಸಾವಿರ ಮನೆಗಳು, ಜಲ ಜೀವನ್ ಮಿಷನ್ ಯೋಜನೆಯಲ್ಲಿ 66 ಕಾಮಗಾರಿಗಳನ್ನು ಅನುಷ್ಠಾನ ಗೊಳಿಸಲಾಗಿದೆ, 18 ಪ್ರಾರಂಭವಾಗಿದ್ದು, 400 ಕೋಟಿ ಹಣವನ್ನು ತಾಲೂಕಿನ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಹಾಕಲಾಗಿದೆ. ಪುರವರ ಹೋಬಳಿಗೆ ರಸ್ತೆ, ಚರಂಡಿ ವ್ಯವಸ್ಥೆಗೆ 20 ಕೋಟಿ ರೂ. ಸರಕಾರದಿಂದ ಅನುದಾನ ನೀಡಲಾಗಿದೆ. ಜಯಮಂಗಲಿ ನದಿ ಸೇತುವೆ ನಿರ್ಮಾಣಕ್ಕೆ ಸುಮಾರು 15 ರಿಂದ 20 ಕೋಟಿ ಹಣ ಖರ್ಚು ಮಾಡಲಾಗಿದೆ. ಇದೇ ಜ.29ಕ್ಕೆ ಜಿಲ್ಲೆಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಭೇಟಿ ನೀಡಲಿದ್ದು, ನೀವೆಲ್ಲರೂ ಕಾರ್ಯಕ್ರಮಕ್ಕೆ ಭಾಗವಹಿಸಿ ಯಶಸ್ವಿಯಾಗುವಂತೆ ಮಾಡಬೇಕು. ಗ್ರಾಮದ ಜನರ ಬೇಡಿಕೆಯಂತೆ ಬಸ್ಸು, ರಸ್ತೆ ಸೇರಿದಂತೆ ಅನೇಕ ಮನವಿಗಳನ್ನೂ ಸ್ವೀಕರಿಸಿ, ಜಿಲ್ಲಾಡಳಿತದಿಂದ ಸೂಕ್ತ ವ್ಯವಸ್ಥೆ ಮಾಡಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಕೊಡ್ಲಪುರ ಗ್ರಾಮ ಪಂಚಾಯತಿ ಅಧ್ಯಕ್ಷ ವೆಂಕಟೇಶ್,ಉಪಾಧ್ಯಕ್ಷ ಪುಟ್ಟ ಹನುಮಂತಯ್ಯ, ತಹಶೀಲ್ದಾರ್ ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್,ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ತಪ್ಪ, ಕುರುಬರ ಸಂಘದ ಮುಖಂಡರಾದ ಮೈಲಾರಪ್ಪ, ರಾಜ್ ಕುಮಾರ್, ಡಾ.ನಾಗಣ್ಣ, ಮುಖಂಡರು,ಸಾರ್ವಜನಿಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News