ತುಮಕೂರು ನಗರಸಭೆಯ 11ನೇ ವಾರ್ಡ್‌ನ ಗಂಗಸಂದ್ರಕ್ಕೆ ಮೂಲ ಸೌಕರ್ಯ ಒದಗಿಸುವಂತೆ ನೈಜ ಹೋರಾಟಗಾರರ ವೇದಿಕೆ ಆಗ್ರಹ

Update: 2024-02-10 18:58 GMT

ತುಮಕೂರು : ಇಲ್ಲಿನ ನಗರಸಭೆಯ 11 ನೇ ವಾರ್ಡ್‌ನ ಗಂಗಸಂದ್ರ ಸೌಲಭ್ಯ ವಂಚಿತವಾಗಿದೆ. ಇಲ್ಲಿ ನಿವಾಸಿಗಳ ಬಳಿ ರೇಷನ್ ಕಾರ್ಡ್ ಇದ್ದರೂ ಅವರಿಗೆ ಯಾವುದೇ ಮೂಲಭೂತ ಸೌಕರ್ಯವಿಲ್ಲ. ಕನಿಷ್ಠ, ಶೌಚಾಲಯವೂ ಇಲ್ಲದೇ ನರಳುತ್ತಿದ್ದಾರೆ. ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ. ರಸ್ತೆ, ವಿದ್ಯುತ್ ದೀಪ, ಶಾಲೆ – ಅಂಗನವಾಡಿಗಳಿಂದ ವಂಚಿತರಾಗಿದ್ದಾರೆ ಎಂದು ನೈಜ ಹೋರಾಟಗಾರರ ವೇದಿಕೆ ಆರೋಪಿಸಿದೆ.

ಈ ಪ್ರದೇಶದಲ್ಲಿ ಕೇವಲ ಏಳು ಗುಡಿಸಲುಗಳು ಮಾತ್ರ ಇದೆ. ಎರಡನೇ ತಲೆಮಾರಿನ ಜನರು, ಸುಮಾರು 50 ವರ್ಷಗಳಿಂದ ಇಲ್ಲಿ ವಾಸ ಮಾಡುತ್ತಿದ್ದಾರೆ. ಲೋಕಸಭಾ ಸದಸ್ಯ ಜಿ.ಎಸ್ ಬಸವರಾಜ್ ಅವರ ಮನೆ ಇಲ್ಲಿಂದ ಕೂಗಳತೆಯ ದೂರದಲ್ಲಿದೆ. ಆದರೂ ರಾಜಕಾರಣಿಗಳು, ಜನಪ್ರತಿನಿಧಿಗಳು ಕೇವಲ ಚುನಾವಣೆಗೆ ಮಾತ್ರ ಈ ಕಡೆ ಬರುತ್ತಾರೆ ಎಂದು ವೇದಿಕೆ ತಿಳಿಸಿದೆ.

ಇಲ್ಲಿನ ನಿವಾಸಿಗಳಿಗೆ ತುಮಕೂರು ಜಿಲ್ಲಾಡಳಿತ ಮತ್ತು ನಗರಸಭೆ ಮೂಲಭೂತ ಸೌಕರ್ಯಗಳನ್ನು ನೀಡಿ ಮುಖ್ಯ ವಾಹಿನಿಗೆ ತರಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ನೈಜ ಹೋರಾಟಗಾರರ ವೇದಿಕೆಯು ಆಗ್ರಹಿಸಿದೆ. ವೇದಿಕೆಯ ಮುಖಂಡರಾದ ಹಂದ್ರಾಳ್ ನಾಗಭೂಷಣ್, ಕುಣಿಗಲ್ ನರಸಿಂಹಮೂರ್ತಿ, ಜಿ.ಎಚ್ ರಾಜು, ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್ಎಂ ವೆಂಕಟೇಶ್ ರವರು ಈ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ಪತ್ರ ಬರೆದು ದೂರು ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.

 

 

 

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News