ತುಮಕೂರು | ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ತಾಯಿ ಎದುರೇ ಮಗ ಮೃತ್ಯು

Update: 2024-09-01 09:29 GMT

ಸಾಂದರ್ಭಿಕ ಚಿತ್ರ (PC:Meta AI)

ತುಮಕೂರು : ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದನ್ನು ಗಮನಿಸದೆ ತಿಪ್ಪೆಗೆ ಕಸ ಹಾಕಲು ಹೋಗಿದ್ದ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ದ್ವಾರನಹಳ್ಳಿಯಲ್ಲಿ ನಡೆದಿದೆ.

ಮೃತ ಬಾಲಕನನ್ನು ಸಾಗರ್ ಎಂದು ಗುರುತಿಸಲಾಗಿದೆ.  ಸಾಗರ್‌ ದ್ವಾರನಹಳ್ಳಿಯಲ್ಲಿ ಆಂಗ್ಲ ಶಾಲೆಯೊಂದರಲ್ಲಿ ಎಸೆಸೆಲ್ಸಿ ಕಳಿಯುತ್ತಿದ್ದ ಎಂದು ತಿಳಿದು ಬಂದಿದೆ.

ಶನಿವಾರ ಮಧ್ಯಾಹ್ನದವರೆಗೂ ಶಾಲೆಯಲ್ಲೇ ಇದ್ದು ಪರೀಕ್ಷೆ ಬರೆದಿದ್ದ ಸಾಗರ್, ಬಳಿಕ ಮನೆಗೆ ಹಿಂತಿರುಗಿದ್ದಾನೆ. ತನ್ನ ತಂದೆ ರವಿಕುಮಾರ್ ಅನಾರೋಗ್ಯ ನಿಮ್ಮಿತ್ತ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿದ್ದ ಸೆಗಣಿಯನ್ನು ತನ್ನ ತಾಯಿಯ ಜೊತೆಗೆ ತೆರಳಿ ತಿಪ್ಪೆಗೆ ಹಾಕಲು ಸಾಗರ್ ತೆರಳಿದ್ದ. ಆ ವೇಳೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದನ್ನು ಗಮನಿಸದೆ ಸಾಗರ್ ತಂತಿಯನ್ನು ತುಳಿದಿದ್ದು, ಸ್ಥಳದಲ್ಲೇ ಸಾಗರ್‌ ಮೃತಪಟಿದ್ದಾನೆ ಎನ್ನಲಾಗಿದೆ. ಪಕ್ಕದಲ್ಲೇ ಇದ್ದ ತಾಯಿ ಕೂದಲೆಳೆ ಅಂತರದಿಂದ ಪಾರಾದರೆಂದು ತಿಳಿದುಬಂದಿದೆ.

ಕಳೆದ ಮೂರ್ನಾಲ್ಕು ದಿನಗಳ ಹಿಂದೆಯೇ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು ಎನ್ನಲಾಗಿದೆ. ಈ ಕುರಿತು ಬೆಸ್ಕಾಂನ ಲೈನ್ ಮೆನ್ ಸೇರಿದಂತೆ ಶಾಖಾ ವ್ಯವಸ್ಥಾಪಕರಿಗೂ ತಿಳಿಸಲಾಗಿತ್ತು. ಆದರೂ ಸಹ ಬೆಸ್ಕಾನ ಸಿಬ್ಬಂದಿ ನಿರ್ಲಕ್ಷ್ಯ ಧೋರಣೆ ತಾಳಿದ ಕಾರಣ ಅಮಾಯಕ ಜೀವ ಬಲಿಯಾಗಿದೆ ಎಂದು ದ್ವಾರನಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಲಕ ಸಾಗರ್‌ನ ಮೃತದೇಹವನ್ನು ನೋಡಲು ಆಗಮಿಸಿದ ಶಾಸಕ ಎಂ.ಟಿ.ಕೃಷ್ಣಪ್ಪ ಅವರು ಮೃತದೇಹ ಕಂಡು ಕೆಲ ಕಾಲ ಗದ್ಗತಿತರಾದರು. ವಿದ್ಯುತ್ ತಂತಿ ತುಂಡಾಗಿದ್ದರೂ ಸೂಕ್ತ ಕ್ರಮ ಕೈಗೊಳ್ಳದ ಸಿಬ್ಬಂದಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಅವರನ್ನು ಕೂಡಲೇ ಅಮಾನತಿನಲ್ಲಿಡಬೇಕೆಂದು ಬೆಸ್ಕಾಂನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜಶೇಖರ್ ಅವರಿಗೆ ಸೂಚನೆ ನೀಡಿದರು.

ಅಮಾಯಕ ವಿದ್ಯಾರ್ಥಿ ಸಾಗರ್ ಬೆಸ್ಕಾಂ ನ ನಿರ್ಲಕ್ಷ್ಯದಿಂದ ಮೃತಪಟ್ಟಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರವನ್ನು ಬೆಸ್ಕಾಂನಿಂದ ಕೊಡಿಸಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಅಧಿಕಾರಿಗಳಿಗೆ ಸೂಚಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News