ತುಮಕೂರು | ಒಂದೇ ಕುಟುಂಬದ ಐದು ಮಂದಿ ಆತ್ಮಹತ್ಯೆ ಪ್ರಕರಣ: ಐವರು ಪೊಲೀಸ್ ವಶಕ್ಕೆ

Update: 2023-11-27 05:59 GMT

ತುಮಕೂರು, ನ.27: ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೃತ ಗರೀಬ್ ಸಾಬ್ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದ ಐದು ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಜಿಲ್ಲಾ ಸ್ಪತ್ರೆಯ ಶವಾಗಾರಕ್ಕೆ ಸೋಮವಾರ ಬೆಳಗ್ಗೆ ಭೇಟಿ ನೀಡಿದ ಸಚಿವರು, ಸಾಲಬಾಧೆ ಮತ್ತು ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡವರ ಮೃತದೇಹಗಳ ಅಂತಿಮ ದರ್ಶನ ಪಡದ ಬಳಿಕ ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.

ಆತ್ಮಹತ್ಯೆಯ ಹಿಂದೆ ಬಡ್ಡಿ ವ್ಯವಹಾರ ಇದೆ ಎಂದು ಜನರು ಮಾತನಾಡುತ್ತಿದ್ದಾರೆ. ಅದನ್ನು ಗಂಭೀರವಾಗಿ ತೆಗದುಕೊಂಡು, ಬಡ್ಡಿ ವ್ಯವಹಾರವನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಬಡ್ಡಿ ವ್ಯವಹಾರ ಮಾಡುವವರ ವಿರುದ್ಧ ಕಾನೂನು ಕ್ರಮ  ಕೈಗೊಳ್ಳುತ್ತೇವೆ. ತನಿಖೆಯ ನಂತರ ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿಯಲಿದೆ ಸಚಿವ ಪರಮೇಶ್ವರ್ ಎಂದರು.

ಮೀಟರ್ ಬಡ್ಡಿ ಮಾಡುವರ, ದಂಧೆ ನಡೆಸುವವರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ. ಇಂತಹ ಘಟನೆ ಮರುಕಳಿಸಬಾರದು. ಇದನ್ನು ತಡೆಯುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿ.ಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಜೊತೆಗಿದ್ದರು.

ಮೂವರು ಮಕ್ಕಳನ್ನು ಸಾಯಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಸದಾಶಿವ ನಗರದಲ್ಲಿ ರವಿವಾರ ರಾತ್ರಿ ನಡೆದಿತ್ತು. ಗರೀಬ್ ಸಾಬ್ (36), ಸುಮಯಾ (32), ಹಾಜಿರಾ (14), ಮುಹಮ್ಮದ್ ಶುಬಾನ್ (10) ಮತ್ತು ಮುಹಮ್ಮದ್ ಮುನೀರ್ (8) ಮೃತರು. ಅಕ್ಕಪಕ್ಕದ ಮನೆಯವರ ಕಿರುಕುಳ, ವ್ಯಾಪಾರ ನಷ್ಟದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News