ಸಂಸತ್ತಿನಲ್ಲಿ ಒಂದು ದಿನವೂ ಬಾಯಿ ಬಿಡದೆ ಬಿಜೆಪಿ ಸಂಸದರಿಂದ ರಾಜ್ಯಕ್ಕಾಗಿರುವ ಪ್ರಯೋಜನವೇನು?: ಸಿಎಂ ಸಿದ್ದರಾಮಯ್ಯ
ತುಮಕೂರು : ಬರಪರಿಹಾರ,ಜಿ.ಎಸ್.ಟಿ ಪಾಲು ಸೇರಿದಂತೆ ಎಲ್ಲಾ ವಿಚಾರಗಳಲ್ಲಿಯೂ ಕರ್ನಾಟಕಕ್ಕೆ ಅನ್ಯಾಯವಾದರೂ ಒಂದು ದಿನವೂ ಸಂಸತ್ತಿನಲ್ಲಿ ಬಾಯಿ ಬಿಡದೆ ಬಿಜೆಪಿ ಸಂಸದರಿಂದ ಈ ರಾಜ್ಯಕ್ಕೆ ಆಗಿರುವ ಪ್ರಯೋಜನವಾದರೂ ಏನು ?, ಇಂತಹವರನ್ನು ಮತ್ತೊಮ್ಮೆ ಸಂಸತ್ತಿಗೆ ಕಳುಹಿಸಬೇಕೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ತುಮಕೂರು ತಾಲೂಕು ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್‍ನಲ್ಲಿ ಕಾಂಗ್ರೆಸ್ ಪಕ್ಷದವತಿಯಿಂದ ಆಯೋಜಿಸಿದ್ದ ಪ್ರಜಾದ್ವನಿ-02 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,2014 ರಿಂದ 2019ವರೆಗೆ ಸಂಸದರಾಗಿದ್ದ ಮುದ್ದಹನುಮೇಗೌಡರು ನಿಮ್ಮ ದ್ವನಿಯಾಗಿ ಸಂಸತ್ತಿನಲ್ಲಿ ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದ ಪರವಾಗಿ ದ್ವನಿ ಎತ್ತಿದ್ದಾರೆ. ಇಂತಹವರನ್ನು ಮತ್ತೊಮ್ಮೆ ಸಂಸತ್ತಿಗೆ ಹೋಗುವಂತೆ ನೀವೆಲ್ಲರೂ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಡಪಾಯಿ ಪುಟ್ಟರಂಗಶಟ್ಟಿ ಹಾಗೂ ನನ್ನ ವಿರುದ್ಧ ಸೋತ ಸೋಮಣ್ಣ ಅವರನ್ನು ಇಲ್ಲಿಗೆ ಕರೆದುಕೊಂಡು ಬಂದು ನಿಲ್ಲಿಸಿದ್ದಾರೆ. ಸೋಮಣ್ಣ ವಸತಿ ಸಚಿವರಾಗಿದ್ದ ಸಂದರ್ಭದಲ್ಲಿ ಒಂದೇ ಒಂದು ಮನೆ ಬಡವರಿಗೆ ಹಂಚಿಕೆ ಮಾಡಿದ ನಿದರ್ಶನವಿದ್ದರೆ ಹೇಳಲಿ ನೋಡೋಣ. ಒಂದು ಮನೆ ಕೊಡಲಿಲ್ಲ. ನಮ್ಮ ಅವಧಿಯಲ್ಲಿ 14.46 ಲಕ್ಷ ಮನೆಗಳನ್ನು ಕಟ್ಟಿಸಿದ್ದೇವೆ. ಕೆಲಸ ಮಾಡದ ಸೋಮಣ್ಣನನ್ನು ಒಳ್ಳೆಯ ಕೆಲಸಗಾರರ ಎಂದು ಬಿಜೆಪಿ ಬಿಂಬಿಸಲು ಹೊರಟಿದೆ. ಸೋಮಣ್ಣನವರನ್ನು ಲೋಕಸಭೆಗೆ ಕಳಿಸಿದರೆ, ನಿಮ್ಮ ಸಮಸ್ಯೆಗಳನ್ನು ಪ್ರಸ್ತಾಪ ಮಾಡುತ್ತಾರೆಯೇ, ನಿಮ್ಮ ಪರವಾಗಿ ಧ್ವನಿ ಎತ್ತುತ್ತಾರೆ ಎಂಬ ನಂಬಿಕೆ ನಿಮಗಿದೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ನಮ್ಮ ಗ್ಯಾರಂಟಿಯನ್ನು ಕದ್ದು ಪ್ರಣಾಳಿಕೆಯಲ್ಲಿ ಸೇರಿಸಿದೆ
ನಾವು ಹಿಂದೆ ಅಧಿಕಾರದಲ್ಲಿದ್ದಾಗ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು. ಜೊತೆಗೆ 30 ಕಾರ್ಯಕ್ರಮಗಳನ್ನು ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ. 2023ರಲ್ಲಿ ನಾನು ಮತ್ತು ಡಿ.ಕೆ. ಶಿವಕುಮಾರ್ ಅವರು 50 ಗ್ಯಾರಂಟಿಗಳಿಗೆ ಸಹಿ ಮಾಡಿ ಕೊಟ್ಟಿದ್ದೆವು. ಕಾಂಗ್ರೆಸ್ ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಬಿಜೆಪಿ ಟೀಕಿಸಿತ್ತು.ಆದರೆ ಎಷ್ಟೇ ಕಷ್ಟವಾದರೂ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಅಂದು ಗ್ಯಾರಂಟಿಗಳಿಂದ ದೇಶ ದಿವಾಳಿ ಆಗುತ್ತದೆ ಎಂದ ಬಿಜೆಪಿ ಇಂದು ಮೋದಿ ಗ್ಯಾರಂಟಿ ಹೆಸರಿನಲ್ಲಿ ನಮ್ಮ ಗ್ಯಾರಂಟಿಯನ್ನು ಕದ್ದು ಪ್ರಣಾಳಿಕೆಯಲ್ಲಿ ಸೇರಿಸಿದೆ ಎಂದರು.
ಬಿಜೆಪಿಯವರ ಮನೆದೇವರೇ ಸುಳ್ಳು. 2019 ರಿಂದ 2023ರವರೆಗೆ ರಾಜ್ಯದಲ್ಲಿದ್ದ ಬಿಜೆಪಿಯ ಸರಕಾರ ಕೇವಲ ಲೂಟಿ ಮಾಡಿದ್ದಾರೆ. ಬಡವರಿಗೆ ಮನೆ ಕಟ್ಟಿಕೊಡಲು ವಿಫಲವಾದ ಬಿಜೆಪಿಯ ವಿ.ಸೋಮಣ್ಣ ಲೋಕಸಭೆಯಲ್ಲಿ ಏನು ಮಾಡುತ್ತಾರೆ. ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮುದ್ದುಹನುಮೇಗೌಡರು ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಹಿಂದುಳಿದ, ದಲಿತರ, ರೈತರ ಹಾಗೂ ಬಡವರ ಪರ ನಾಯಕರಾಗಿದ್ದಾರೆ. ರಾಜ್ಯದ ಧ್ವನಿಯಾಗಿ ಲೋಕಸಭೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುವ ಮುದ್ದೇಹನುಮಗೌಡರನ್ನು ಜನರ ಗೆಲ್ಲಿಸಬೇಕೆಂದು ಕೋರಿದರು.
ವೇದಿಕೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್,ಸಹಕಾರ ಸಚಿವ ಕೆ.ಎನ್.ರಾಜಣ್ಣ, ಶಾಸಕ ಎಸ್.ಆರ್.ಶ್ರೀನಿವಾಸ್, ಕೆ.ಷಡಕ್ಷರಿ,ವಿ.ಪ.ಸದಸ್ಯ ಆರ್.ರಾಜೇಂದ್ರ,ಮಾಜಿ ಶಾಸಕರಾದ ಕೆ.ಎಸ್.ಕಿರಣಕುಮಾರ್, ಡಾ.ರಫೀಕ್ ಅಹಮದ್, ಎಸ್.ಷಪಿ ಅಹಮದ್, ವಿಧಾನಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು,ಡಿಸಿಸಿ ಅಧ್ಯಕ್ಷ ಚಂದ್ರಶೇಖರಗೌಡ,ನಿಖೇತರಾಜ್ ಮೌರ್ಯ, ರಾಮಕೃಷ್ಣ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.