ಉಡುಪಿಯಲ್ಲಿ 11 ಕ್ರೀಡಾಸ್ಪರ್ಧೆ; 1373 ಕ್ರೀಡಾ ಸ್ಪರ್ಧಿಗಳು: ಜಿಲ್ಲಾಧಿಕಾರಿ ವಿದ್ಯಾಕುಮಾರಿ
ಉಡುಪಿ, ಜ.13: ಕರ್ನಾಟಕ ಒಲಿಂಪಿಕ್ ಸಂಸ್ಥೆ, ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತಗಳ ಸಂಯುಕ್ತ ಆಶ್ರಯದಲ್ಲಿ ಇದೇ ಜನವರಿ17ರಿಂದ 23ರವರೆಗೆ ಉಡುಪಿ ಮತ್ತು ಮಂಗಳೂರಿನಲ್ಲಿ ನಡೆಯಲಿರುವ ಮೂರನೇ ಕರ್ನಾಟಕ ಕ್ರೀಡಾಕೂಟ-2025ರ ಒಟ್ಟು 11 ಕ್ರೀಡಾ ಸ್ಪರ್ಧೆಗಳು ಉಡುಪಿಯ ವಿವಿದೆಡೆಗಳಲ್ಲಿ ನಡೆಯಲಿದ್ದು, ಇದರಲ್ಲಿ ಒಟ್ಟು 1373 ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಒಲಿಂಪಿಕ್ಸ್ ಮಾದರಿ ಯಲ್ಲಿ ನಡೆಯಲಿರುವ ಕರ್ನಾಟಕ ಕ್ರೀಡಾಕೂಟದಲ್ಲಿ ಒಟ್ಟು 25 ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದ್ದು, ಇವುಗಳಲ್ಲಿ 12 ಕ್ರೀಡಾ ಸ್ಪರ್ಧೆಗಳು ಮಂಗಳೂರಿನಲ್ಲೂ, 11 ಉಡುಪಿ ಹಾಗೂ ಮಣಿಪಾಲದ ಮಾಹೆಯಲ್ಲೂ, ಎರಡು ಸ್ಪರ್ಧೆಗಳು ಬೆಂಗಳೂರಿನಲ್ಲೂ ನಡೆಯಲಿವೆ ಎಂದರು.
ಮೊದಲೆರಡು ಕರ್ನಾಟಕ ಕ್ರೀಡಾಕೂಟಗಳು ಬೆಂಗಳೂರು ಹಾಗೂ ಹುಬ್ಬಳ್ಳಿ ಮತ್ತು ಧಾರವಾಡಗಳಲ್ಲಿ ನಡೆದಿದ್ದರೆ, ಇದೀಗ ಮೂರನೇ ಕ್ರೀಡಾಕೂಟ ಮಂಗಳೂರು-ಉಡುಪಿಗಳಲ್ಲಿ ನಡೆಯಲಿವೆ. ಇದರಲ್ಲಿ 3247 ಕ್ರೀಡಾಪಟುಗಳು ಮತ್ತು 599 ಮಂದಿ ತಾಂತ್ರಿಕ ಅಧಿಕಾರಿಗಳು, ಸಂಘಟಕರ ತಂಡ ಸೇರಿದಂತೆ ಒಟ್ಟು 4250 ಮಂದಿ ಭಾಗವಹಿಸಲಿದ್ದಾರೆ ಎಂದು ಡಾ.ವಿದ್ಯಾಕುಮಾರಿ ವಿವರಿಸಿದರು.
ಉಡುಪಿಯಲ್ಲಿ ಅಥ್ಲೆಟಿಕ್ಸ್: ಈ ಬಾರಿ ಅಥ್ಲೆಟಿಕ್ಸ್‌ನ ಎಲ್ಲಾ ಟ್ರ್ಯಾಕ್ ಹಾಗೂ ಫೀಲ್ಡ್ ಸ್ಪರ್ಧೆಗಳು ಸೇರಿದಂತೆ ಬಿಲ್ಲುಗಾರಿಕೆ, ಬಾಕ್ಸಿಂಗ್, ಸೈಕ್ಲಿಂಗ್, ಜೂಡೋ, ಕಬ್ಬಡಿ, ಕುಸ್ತಿ, ಕಯಾಕಿಂಗ್ ಮತ್ತು ಕನೂಯಿಂಗ್, ಹಾಕಿ ಲಾನ್ ಟೆನಿಸ್, ಟೇಬಲ್ ಟೆನಿಸ್ ಸ್ಪರ್ಧೆಗಳು ಉಡುಪಿಯಲ್ಲಿ ನಡೆಯಲಿವೆ. ಇವುಗಳಲ್ಲಿ ಹಾಕಿ, ಲಾನ್ ಟೆನಿಸ್, ಟೇಬಲ್ ಟೆನಿಸ್ ಸ್ಪರ್ಧೆಗಳು ಮಣಿಪಾಲದ ಮಾಹೆಯಲ್ಲೂ, ಕಯಾಕಿಂಗ್ ಮತ್ತು ಕನೂಯಿಂಗ್ ಸ್ಪರ್ಧೆಗಳು ಬ್ರಹ್ಮಾವರದ ಹೇರೂರು ಸಮೀಪದ ಸ್ವರ್ಣ ನದಿಯಲ್ಲೂ ನಡೆಯಲಿದೆ ಎಂದರು.
631 ಚಿನ್ನದ ಪದಕ: ಒಟ್ಟಾರೆಯಾಗಿ ಉಡುಪಿಯಲ್ಲಿ ನಡೆಯುವ 11 ಸ್ಪರ್ಧೆಗಳಲ್ಲಿ 1373 ಕ್ರೀಡಾಪಟುಗಳು, 260 ಮಂದಿ ತಾಂತ್ರಿಕ ಸಿಬ್ಬಂದಿಗಳು ಸೇರಿದಂತೆ ಒಟ್ಟು 1633 ಮಂದಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ಸ್ಪಧೆಯಲ್ಲೂ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆಗಳಿರುತ್ತವೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಸ್ಪರ್ಧಿಗಳು 631 ಚಿನ್ನದ ಪದಕಗಳು, 631 ಬೆಳ್ಳಿಯ ಪದಕಗಳು ಹಾಗೂ 827 ಕಂಚಿನ ಪದಕಗಳಿಗಾಗಿ ವಿವಿಧ ಸ್ಪರ್ಧೆ ಗಳಲ್ಲಿ ಸೆಣಸಾಟ ನಡೆಸಲಿದ್ದಾರೆ. ಎಲ್ಲಾ ಸ್ಪರ್ಧೆಗಳಿಗೂ ಜಿಲ್ಲೆಯ ಕ್ರೀಡಾಸಕ್ತ ರಿಗೆ ಉಚಿತ ಪ್ರವೇಶವಿರುತ್ತದೆ ಎಂದು ಅವರು ಹೇಳಿದರು.
ಕರಾವಳಿಯ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಕಡಲಿನ ಅಗಾಧತೆಯನ್ನು ಪ್ರತಿಬಿಂಬಿಸುವ ಕ್ರೀಡಾಕೂಟದ ಲಾಂಛನವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈಗಾಗಲೇ ಬೆಂಗಳೂರಿನಲ್ಲಿ ಬಿಡುಗಡೆ ಗೊಳಿಸಿ ದ್ದಾರೆ ಎಂದು ಜಿಲ್ಲಾಧಿಕಾರಿ ಜ.17ರಂದು ಸಂಜೆ 4ಗಂಟೆಗೆ ಮಂಗಳೂರಿ ಮಂಗಳಾ ಸ್ಟೇಡಿಯಂನಲ್ಲಿ ಮುಖ್ಯಮಂತ್ರಿಗಳೇ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ ಎಂದರು.
ಕ್ರೀಡಾಕೂಟದ ಸಮಾರೋಪ ಸಮಾರಂಭ ಜ.23ರಂದು ಸಂಜೆ 5:00 ಗಂಟೆಗೆ ಅಜ್ಜರಕಾಡಿನ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಇದರಲ್ಲಿ ಭಾಗವಹಿಸಲಿದ್ದಾರೆ. ಇವರೊಂದಿಗೆ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಇಂಧನ ಸಚಿವ ಕೆ.ಜೆ. ಜಾರ್ಜ್, ಉಡುಪಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ದಿನೇಶ್ ಗುಂಡೂರಾವ್ ಹಾಗೂ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಜಿಲ್ಲಾ ಯುವಜನ ಮತ್ತು ಕ್ರೀಡಾಧಿಕಾರಿ ಡಾ.ರೋಶನ್‌ಕುಮಾರ್ ಶೆಟ್ಟಿ, ಮಾಹೆಯ ಕ್ರೀಡಾ ಸಂಯೋಜಕ ಡಾ.ವಿನೋದ್ ನಾಯಕ್ ಉಪಸ್ಥಿತರಿದ್ದರು.
ಉಡುಪಿಯಲ್ಲಿ ನಡೆಯಲಿರುವ ಕ್ರೀಡಾಸ್ಪರ್ಧೆಗಳ ವಿವರ
ಕ್ರೀಡೆ ದಿನಾಂಕ ಸ್ಪರ್ಧಾ ಸ್ಥಳ
*ಕಯಾಕಿಂಗ್ ಜ.17,18 ಸ್ವರ್ಣ ನದಿ, ಹೇರೂರು.
ಕನೂಯಿಂಗ್
*ಬಿಲ್ಲುಗಾರಿಕೆ ಜ.18, 19 ಎಂಜೆಸಿ ಮಣಿಪಾಲ
*ಸೈಕ್ಲಿಂಗ್ ಜ.19 ಸ.ಪ್ರೌ.ಶಾಲೆ ಉಪ್ಪೂರು
*ಕುಸ್ತಿ ಜ.18, 19 ಟೆನಿಸ್ ಕೋರ್ಟ್ ಉಡುಪಿ
*ಬಾಕ್ಸಿಂಗ್ ಜ.18ರಿಂದ 20 ಜಿಲ್ಲಾ ಕ್ರೀಡಾಂಗಣ ಉಡುಪಿ
*ಹಾಕಿ ಜ.18ರಿಂದ 20 ಮಾಹೆ ಮಣಿಪಾಲ
*ಲಾನ್‌ಟೆನಿಸ್ ಜ.18ರಿಂದ 21 ಮರೀನಾ ಮಣಿಪಾಲ
*ಟೇಬಲ್‌ಟೆನಿಸ್ ಜ.18ರಿಂದ 21 ಮರೀನಾ ಮಣಿಪಾಲ
*ಕಬಡ್ಡಿ ಜ.19ರಿಂದ 23 ಜಿಲ್ಲಾ ಕ್ರೀಡಾಂಗಣ ಉಡುಪಿ
*ಜೂಡೋ ಜ.21, 22 ಟೆನಿಸ್ ಕೋರ್ಟ್ ಉಡುಪಿ
*ಅಥ್ಲೆಟಿಕ್ಸ್ 21ರಿಂದ 23 ಜಿಲ್ಲಾ ಕ್ರೀಡಾಂಗಣ ಉಡುಪಿ