ಕುಂದಾಪುರ: ಎ.14ಕ್ಕೆ ದಸಂಸದಿಂದ ‘ಭೀಮೋತ್ಸವ-2025’

ಉಡುಪಿ, ಎ.12: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಸಮಿತಿ ಯಿಂದ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆಯನ್ನು ‘ಭೀಮೋತ್ಸವ-2025’ ಆಗಿ ವಿಶಿಷ್ಟ ಕಾರ್ಯಕ್ರಮಗಳೊಂದಿಗೆ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಟಿ. ಮಂಜುನಾಥ ಗಿಳಿಯಾರು ತಿಳಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರಗಳನ್ನು ನೀಡಿದ ಅವರು, ಕಾರ್ಯಕ್ರಮ ಕುಂದಾಪುರದ ಹೃದಯ ಭಾಗವಾದ ಶಾಸ್ತ್ರೀ ಸರ್ಕಲ್‌ನ ಲಯನ್ಸ್ ಸ್ಕ್ವೇರ್‌ನಲ್ಲಿ ಬೆಳಗ್ಗೆ 10:00ರಿಂದ ನಡೆಯಲಿದೆ ಎಂದರು.
10ಗಂಟೆಗೆ ಪುರಮೆರವಣಿಗೆ ನಡೆಯಲಿದ್ದು, ಮೆರವಣಿಗೆಯು ಶಾಸ್ತ್ರಿ ಸರ್ಕಲ್‌ನಿಂದ ಹೊರಟು ಪಾರಿಜಾತ ವೃತ್ತಿಂದ ತಿರುಗಿ ಕಾರ್ಯಕ್ರಮ ಸ್ಥಳದಲ್ಲಿ ಮುಕ್ತಾಯಗೊಳ್ಳಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮ ದಲ್ಲಿ ಪ್ರತಿಭಾ ಪುರಸ್ಕಾರ, ಅಶಕ್ತರಿಗೆ ನೆರವು ನೀಡಲಾಗುತ್ತದೆ. ಸುಮಾರು 1,500 ಮಂದಿ ಸೇರುವ ನಿರೀಕ್ಷೆ ಇದೆ ಎಂದರು.
ದಸಂಸದ ವತಿಯಿಂದ ಇದೇ ಮೊದಲ ಬಾರಿ ‘ಭೀಮ ಸಾರಥಿ ಪ್ರಶಸ್ತಿ’ಯನ್ನು ನೀಡಲಾಗುತ್ತಿದ್ದು, ಈ ಬಾರಿಯ ಪ್ರಶಸ್ತಿಗೆ ಪೆರ್ನಾಲು ಸಮಗ್ರ ಗ್ರಾಮೀಣ ಆಶ್ರಮದ ಅಶೋಕ್‌ಕುಮಾರ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಅವರಿಗೆ ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಕಾರ್ಯಕ್ರಮದಲ್ಲಿ ಬಾಲಪ್ರತಿಭೆ ಸಮೀಕ್ಷಾ, ಗಣೇಶ್ ಗಂಗೊಳ್ಳಿ, ರವಿ ಬನ್ನಾಡಿ ಚಂದ್ರಶೇಖರ ಕೊರ್ಗಿ ಇವರನ್ನು ಸನ್ಮಾನಿಸಲಾಗುವುದು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವಿದೆ ಎಂದು ಗಿಳಿಯಾರು ತಿಳಿಸಿದರು.
ಬೈಂದೂರಿನ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕುಂದಾಪುರ ಶಾಸಕ ಕಿರಣ್‌ಕುಮಾರ್ ಕೊಡ್ಗಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಟಿ.ಮಂಜುನಾಥ ಗಿಳಿಯಾರ್ ಪ್ರಧಾನ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪೊಲೀಸ್ ಉಪಾಧೀಕ್ಷಕ ಎಚ್.ಡಿ.ಕುಲಕರ್ಣಿ, ಪುರಸಭಾ ಸದಸ್ಯೆ ದೇವಕಿ ಸಣ್ಣಯ್ಯ, ಮಾಜಿ ಪುರಸಭಾ ಅಧ್ಯಕ್ಷೆ ಕಲಾವತಿ ರವಿಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ. ಭಾಗವಹಿಸಲಿದ್ದು, ಉದ್ಯಮಿ ಎಂ.ದಿನೇಶ್ ಹೆಗ್ಡೆ ಮೊಳಹಳ್ಳಿ, ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತಾ, ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಮೌಲಾ ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸುಂದರ ಮಾಸ್ತರ್, ಜಿಲ್ಲಾ ಸ್‌ಘಟನಾ ಸಂಚಾಲಕ ಶ್ಯಾಮ್‌ರಾಜ್ ಬಿರ್ತಿ, ಶ್ಯಾಮರಾಜ್ ತೆಕ್ಕಟ್ಟೆ, ಸುರೇಶ್ ಹಕ್ಲಾಡಿ, ರಾಜೇಂದ್ರನಾಥ್ ಉಪಸ್ಥಿತರಿದ್ದರು.