ಬೀಡಿ ಕಾರ್ಮಿಕರಿಂದ ಸರಕಾರದ ಕನಿಷ್ಠ ಕೂಲಿ ಆದೇಶ ಸುಟ್ಟು ಪ್ರತಿಭಟನೆ

ಕುಂದಾಪುರ, ಎ.15: ಕರ್ನಾಟಕ ರಾಜ್ಯ ಸರಕಾರ ಬೀಡಿ ಕಾರ್ಮಿಕರಿಗೆ 1000 ಬೀಡಿಗೆ ಕನಿಷ್ಠ ಕೂಲಿಯ 2018ರ ತನ್ನ ಆದೇಶವನ್ನು ಉಲ್ಲಂಘಿಸಿ ಕೂಲಿಯನ್ನು ಕಡಿತಗೊಳಿಸಿ ಆದೇಶ ಮಾಡಿರುವುದನ್ನು ಖಂಡಿಸಿ ಕುಂದಾಪುರ ತಾಲೂಕು ಬೀಡಿ ವರ್ಕರ್ಸ್ ಯುನಿಯನ್ ವತಿಯಿಂದ ಬೀಡಿ ಕಾರ್ಮಿಕರು ಕುಂದಾಪುರ ತಾಲೂಕು ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿದರು.
ಘೋಷಣೆಗಳನ್ನು ಕೂಗಿದ ಪ್ರತಿಭಟನಕಾರರು ಆದೇಶ ಹಿಂಪಡೆಯುವಂತೆ ಮುಖ್ಯಮಂತ್ರಿಯವರಿಗೆ ಮನವಿ ನೀಡಿದ್ದಲ್ಲದೆ ಆದೇಶ ಪ್ರತಿಯನ್ನು ಸುಟ್ಟು ಪ್ರತಿಭಟಿಸಿದರು.
ಕನಿಷ್ಠ ಕೂಲಿಗೆ ಸಂಬಂಧಿಸಿದಂತೆ 2018ರ ಮಾ.14ರಂದು ಸರಕಾರ ಕನಿಷ್ಠ ವೇತನ 210 ಹಾಗು ತುಟ್ಟಿಭತ್ಯೆ ಸೂಚ್ಯಾಂಕಕ್ಕೆ 4 ಪೈಸೆಯಂತೆ ಆದೇಶ ಮಾಡಿದ್ದು, ಇದೀಗ 7 ವರ್ಷಗಳ ನಂತರ ಈ ಆದೇಶ ವನ್ನು ಉಲ್ಲಂಘಿಸಿ ಕನಿಷ್ಠ ಕೂಲಿ 185, ತುಟ್ಟಿಭತ್ಯೆ 3 ಪೈಷೆಯಂತೆ ಹಿಮ್ಮುಖವಾಗಿ ನಿಗದಿಪಡಿಸಿ ಆದೇಶ ಹೊರಡಿಸಿದೆ.
ಸರಕಾರದ ಈ ತೀರ್ಮಾನ ಕನಿಷ್ಠ ಕೂಲಿ ತುಟ್ಟಿಭತ್ಯೆ ಬಾಕಿ ಇರಿಸಿಕೊಂಡು ಕಾರ್ಮಿಕರಿಗೆ ಮೋಸ ಮಾಡಿರುವ ಮಾಲಕರ ಪರ ವಹಿಸಿ ಕಾರ್ಮಿಕರಿಗೆ ಅನ್ಯಾಯ ಮಾಡಿದೆ. ಈಗಿನ ಬೆಲೆ ಏರಿಕೆಗೆ ಅನುಗುಣ ವಾಗಿ 1000 ಬೀಡಿಗೆ ಕೂಲಿ 395 ನಿಗದಿಪಡಿಸಬೇಕು ಎಂದು ಸಿಐಟಿಯು ಒತ್ತಾಯಿಸಿದೆ.
ಇಂದಿನ ಪ್ರತಿಭಟನೆಯ ನೇತೃತ್ವವನ್ನು ಸಂಘದ ಅಧ್ಯಕ್ಷ ಮಹಾಬಲ ವಡೇರಹೋಬಳಿ ವಹಿಸಿದ್ದರು. ಇದರಲ್ಲಿ ಕಾರ್ಯದರ್ಶಿ ಬಲ್ಕಿಸ್, ಪದಾಧಿಕಾರಿಗಳಾದ ಗಿರಿಜಾ, ರತ್ನ, ಪ್ರೇಮ, ಸಣ್ಣಮ್ಮ ಹಾಗು ಸಿಐಟಿಯು ಮುಖಂಡರಾದ ಕೆ ಶಂಕರ್, ಎಚ್.ನರಸಿಂಹ, ಚಂದ್ರಶೇಖರ್ ವಿ. ಭಾಗವಹಿಸಿದ್ದರು.

