ಉಡುಪಿ: ಅಗ್ನಿಶಾಮಕ ಸೇವಾ ಸಪ್ತಾಹ, ಪ್ರಾತ್ಯಕ್ಷಿಕೆ

ಉಡುಪಿ: ಎ.14ರಿಂದ ಪ್ರಾರಂಭಗೊಂಡು ಎ.20ರವರೆಗೆ ನಡೆಯಲಿರುವ ಅಗ್ನಿ ಶಾಮಕ ಸೇವಾ ಸಪ್ತಾಹದ ಅಂಗವಾಗಿ ಉಡುಪಿಯ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಅಗ್ನಿ ಅಕಸ್ಮಿಕ, ಅದನ್ನು ತಡೆಗಟ್ಟುವ ಕುರಿತು ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಯನ್ನು ಪತ್ರಕರ್ತರೆದುರು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಪ್ರಭಾರ ಅಗ್ನಿಶಾಮಕ ಅಧಿಕಾರಿ ರವೀಂದ್ರ ಅವರು, ಬೇಸಿಗೆಯ ದಿನವಾಗಿರುವುದರಿಂದ ಜಿಲ್ಲೆಯಲ್ಲಿ ಇತ್ತೀಚೆಗೆ ಬೆಂಕಿ ಅಕಸ್ಮಿಕ, ದುರಂತದ ಘಟನೆಗಳು ಹೆಚ್ಚುತ್ತಿವೆ. ಈ ಬಗ್ಗೆ ಜಿಲ್ಲೆಯ ಎಲ್ಲರೂ ಜಾಗೃತೆ ವಹಿಸಬೇಕಿದೆ ಎಂದರು.
ಕಳೆದ ಜನವರಿ ಒಂದರಿಂದ ಎ.14ರವರೆಗೆ ಜಿಲ್ಲೆಯಲ್ಲಿ 120 ಅಗ್ನಿ ಅಕಸ್ಮಿಕ ಕರೆಗಳನ್ನು ಸ್ವೀಕರಿಸಲಾ ಗಿದೆ. ಅಲ್ಲದೇ 20 ರಕ್ಷಣಾ ಕರೆಯನ್ನೂ ಠಾಣೆಗಳು ಸ್ವೀಕರಿಸಿವೆ. ನಮ್ಮ ಸಿಬ್ಬಂದಿಗಳು ಸರದಿಯಂತೆ ದಿನದ 24 ಗಂಟೆಗಳ ಕಾಲವೂ ಕರ್ತವ್ಯದಲ್ಲಿ ನಿರತರಾಗಿರುತ್ತೇವೆ. ದಿನದ ಯಾವುದೇ ಹೊತ್ತಿನಲ್ಲಿ ಕರೆ ಬಂದರೂ ನಾವು ಎಲ್ಲಾ ಸಿದ್ಧತೆಗಳೊಂದಿಗೆ ತಕ್ಷಣವೇ ಸ್ಥಳಕ್ಕೆ ಧಾವಿಸುತ್ತೇವೆ ಎಂದರು.
ಅಗ್ನಿ ದುರಂತಗಳಂತೆ ನಾವು, ಭೂಕಂಪ, ಕಾಡ್ಗಿಚ್ಚುಗಳ ಬಗ್ಗೆಯೂ ಜಾಗೃತ ರಾಗಿರಬೇಕು. ಅಲ್ಲದೇ ಇತರನ್ನೂ ಜಾಗೃತಗೊಳಿಸಬೇಕು. ಯಾವುದೇ ವಸತಿ ಸಂಕೀರ್ಣದಲ್ಲಿ ಬೆಂಕಿ ಅಕಸ್ಮಿಕ ಸಂಭವಿಸಿದಾಗ, ಅದರಿಂದ ತಪ್ಪಿಸಿಕೊಳ್ಳಲು ಮೇಲಿನ ಮಹಡಿಗೆ, ಬಾಲ್ಕನಿಗಳಿಗೆ ಧಾವಿಸದೇ ಎಲ್ಲರೂ ನೆಲ ಮಹಡಿಗೆ ಬಂದು ಅಲ್ಲಿನ ತೆರೆದ ಪ್ರದೇಶದಲ್ಲಿರಲು ಮೊದಲ ಪ್ರಾಶಸ್ತ್ಯ ನೀಡಬೇಕು ಎಂದು ಕಿವಿಮಾತು ಹೇಳಿದರು.
ಬೆಂಕಿ ದೊಡ್ಡದಿರಲಿ, ಚಿಕ್ಕದಿರಲಿ ಮೊದಲು ಸಹಾಯಕ್ಕಾಗಿ ತಕ್ಷಣವೇ 101ಕ್ಕೆ ಕರೆ ಮಾಡಿ. ಅಥವಾ ನಿಮ್ಮ ಸಮೀಪದ ಅಗ್ನಿಶಾಮಕ ಠಾಣೆಗಳಿಗೆ ಕರೆ ಮಾಡಿ ತಿಳಿಸಿ. ಅಡುಗೆ ಅನಿಲ ಬಳಸುವ ವೇಳೆ, ಅನಿಲದ ಸೋರುವಿಕೆ ಕಂಡಬಂದಾಗ ವಿಶೇಷ ಜಾಗೃತೆ ವಹಿಸಬೇಕು ಎಂದು ರವೀಂದ್ರ ವಿವರಿಸಿದರು.
ಒಂದು ವಾರದ ಅಗ್ನಿಶಾಮಕ ಸೇವಾ ಸಪ್ತಾಹದ ಸಂದರ್ಭದಲ್ಲಿ ಶಾಲಾ-ಕಾಲೇಜುಗಳಿಗೆ, ವಿವಿಧ ಸಂಸ್ಥೆಗಳಿಗೆ, ವಸತಿ ಸಂಕೀರ್ಣಗಳಿಗೆ ತೆರಳಿ ಪ್ರಾತ್ಯಕ್ಷಿಕೆಯ ಮೂಲಕ ಅಗ್ನಿ ಅಕಸ್ಮಿಕದಿಂದ ರಕ್ಷಣೆ ಪಡೆಯುವ ಬಗ್ಗೆ ವಿವರಿಸಲಿದ್ದೇವೆ ಎಂದರು.
ಇದೇ ವೇಳೆ ಪ್ರೆಸ್ ಕ್ಲಬ್‌ನಲ್ಲೂ ಅಗ್ನಿ ಅಕಸ್ಮಿಕದ ಸಂದರ್ಭದಲ್ಲಿ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಾವ ರೀತಿ ಕಾರ್ಯಾಚರಿಸುತ್ತಾರೆ, ವಿವಿಧ ಬಗೆಯ ಬೆಂಕಿಯನ್ನು ಯಾವ ರೀತಿ ನಂದಿಸುತ್ತಾರೆ ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದರು. ಈ ವೇಳೆ ಹೊಂದಿರಬೇಕಾದ ಎಚ್ಚರಿಕೆ, ಜಾಗೃತಿ ಕುರಿತು ಸಹ ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಗ್ಮಿಶಾಮಕ ಅಧಿಕಾರಿ ವಿನಾಯಕ ಕಲ್ಗಟಕರ್, ಫೈಯರ್‌ಮನ್‌ಗಳಾದ ಕೇಶವ, ರಾಘವೇಂದ್ರ ಆಚಾರಿ, ಭರತ್ ಮುಂತಾದವರು ಉಪಸ್ಥಿತರಿದ್ದರು.

