ಉಡುಪಿ| ವಿವಿಧ ಕ್ಷೇತ್ರಗಳ 4 ಸಾಧಕರಿಗೆ ಹೊಸ ವರ್ಷದ ಪ್ರಶಸ್ತಿ ಪ್ರದಾನ
ಮಣಿಪಾಲ, ಜ.11: ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧಕರಾದ ಕರಾವಳಿ ಮೂಲದ ನಾಲ್ವರಿಗೆ 2025ನೇ ಸಾಲಿನ ‘ಹೊಸ ವರ್ಷದ ಪ್ರಶಸ್ತಿ’ಯನ್ನು ಇಂದು ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಕರ್ನಾಟಕ ರಾಜ್ಯದ ಮಾಜಿ ಲೋಕಾಯುಕ್ತ, ರಾಜ್ಯ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ, ಭರತನಾಟ್ಯ ಕ್ಷೇತ್ರದ ಅಪ್ರತಿಮ ಸಾಧಕಿ, ಮೈಸೂರಿನ ವಸುಂಧರಾ ಪರ್ಫಾಮಿಂಗ್ ಆರ್ಟ್ಸ್ ಸೆಂಟರ್‌ನ ನಿರ್ದೇಶಕಿ ಡಾ.ವಸುಂಧರಾ ದೊರೆಸ್ವಾಮಿ, ಓರಿಯಂಟಲ್ ಬ್ಯಾಂಕ್ ಆಪ್ ಕಾಮರ್ಸ್‌ನ ನಿವೃತ್ತ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ತೆಕ್ಕಾರ್ ಯಶವಂತ ಪ್ರಭು ಹಾಗೂ ಖ್ಯಾತ ಹೃದ್ರೋಗ ತಜ್ಞ ಮತ್ತು ಹೊಸಕೋಟೆಯ ಎಂವಿಜೆ ಮೆಡಿಕಲ್ ಕಾಲೇಜಿನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಪಿ.ಮೋಹನ ರಾವ್ ಅವರೇ ಇಂದು ಹೊಸ ವರ್ಷ ಪ್ರಶಸ್ತಿಯೊಂದಿಗೆ ಸನ್ಮಾನಿತರಾದ ಸಾಧಕರು.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ), ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಷನ್, ಮಣಿಪಾಲ್ ಎಜ್ಯುಕೇಷನ್ ಆ್ಯಂಡ್ ಮೆಡಿಕಲ್ ಗ್ರೂಪ್, ಮಣಿಪಾಲ ಮೀಡಿಯಾ ನೆಟ್‌ವರ್ಕ್, ಡಾ.ಟಿಎಂಎ ಪೈ ಫೌಂಡೇಷನ್ ಮಣಿಪಾಲಗಳ ಸಹಯೋಗ ದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮಾಹೆಯ ಪ್ರೊ ಚಾನ್ಸಲರ್ ಹಾಗೂ ಎಜಿಇಯ ಅಧ್ಯಕ್ಷ ಡಾ.ಎಚ್. ಎಸ್. ಬಲ್ಲಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಹೆಯ ಕುಲಪತಿ ಲೆ.ಜ.(ಡಾ.) ಎಂ.ಡಿ.ವೆಂಕಟೇಶ್ ಅಭಿನಂದನಾ ಭಾಷಣ ಮಾಡಿದರು.
ಮಾಹೆ ಟ್ರಸ್ಟ್‌ನ ಅಧ್ಯಕ್ಷ, ಎಜಿಇಯ ರಿಜಿಸ್ಟ್ರಾರ್ ಹಾಗೂ ಎಂಇಎಂಜಿಯ ಮುಖ್ಯಸ್ಥ ಡಾ. ರಂಜನ್ ಆರ್. ಪೈ, ಮಣಿಪಾಲ್ ಮೀಡಿಯಾ ನೆಟ್ವರ್ಕ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಟಿ ಸತೀಶ್ ಯು ಪೈ, ಡಾ. ಟಿಎಂಎ ಪೈ ಫೌಂಡೇಶನ್‌ನ ಅಧ್ಯಕ್ಷ ಟಿ ಅಶೋಕ್ ಪೈ ಉಪಸ್ಥಿತರಿದ್ದರು.
ಕೆಎಂಸಿ ಗ್ರೀನ್ಸ್‌ನಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳು ಭಾಗವಹಿಸಿದ್ದರು.