ಉಡುಪಿ: ಅಕ್ಟೋಬರ್ ತಿಂಗಳಲ್ಲಿ ಶೇ.40ರಷ್ಟು ಅಧಿಕ ಹಿಂಗಾರು ಮಳೆ
Update: 2024-11-01 15:33 GMT
ಉಡುಪಿ, ನ.1: 2024ರಲ್ಲಿ ಮಳೆಗಾಲದ ನಾಲ್ಕು ತಿಂಗಳಲ್ಲಿ ಶೇ.12ರಷ್ಟು ಅಧಿಕ ಮುಂಗಾರು ಮಳೆಯನ್ನು ಕಂಡ ಉಡುಪಿ ಜಿಲ್ಲೆಯಲ್ಲಿ ಇದೀಗ ಹಿಂಗಾರು ಮಳೆಯೂ ವಾಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಸುರಿದಿದೆ.
ಜೂನ್‌ನಿಂದ ಸೆಪ್ಟಂಬರ್‌ವರೆಗಿನ ಮುಂಗಾರು ಮಳೆ ಮುಗಿದ ಬಳಿಕ ಅಕ್ಟೋಬರ್‌ನಿಂದ ಕರಾವಳಿಯಲ್ಲಿ ಹಿಂಗಾರು ಮಳೆ ಪ್ರಾರಂಭಗೊಂಡಿದ್ದು, ಮೊದಲ ತಿಂಗಳಲ್ಲೇ ಶೇ.40ರಷ್ಟು ಅಧಿಕ ಮಳೆಯಾಗಿರುವುದಾಗಿ ಜಿಲ್ಲಾದಿಕಾರಿ ಕಚೇರಿಯ ವಿಕೋಪ ನಿಯಂತ್ರಣ ಕೇಂದ್ರದ ಅಂಕಿಅಂಶಗಳಿಂದ ತಿಳಿದುಬಂದಿದೆ.
ಅಕ್ಟೋಬರ್ ತಿಂಗಳ ವಾಡಿಕೆ ಮಳೆ 222 ಮಿ.ಮೀ. ಆಗಿದ್ದು, ಈ ಬಾರಿ 311ಮಿ.ಮೀ. ಮಳೆ ಸುರಿದಿದೆ. ಈ ಮೂಲಕ ಶೇ.40ರಷ್ಟು ಅಧಿಕ ಮಳೆಯಾಗಿದೆ. ಅರಬಿಸಮುದ್ರದಲ್ಲಿ ಕಂಡುಬಂದ ವಾಯುಭಾರ ಕುಸಿತ ಇದಕ್ಕೆ ಕಾರಣವೆನ್ನಬಹುದು.
ಆದರೆ 2023ರ ಅಕ್ಟೋಬರ್ ತಿಂಗಳಲ್ಲಿ ವಾಡಿಕೆಯ 222ಮಿ.ಮೀ. ಮಳೆಯಲ್ಲಿ ಕೇವಲ 152 ಮಿ.ಮೀ. ಮಾತ್ರ ಮಳೆಯಾಗಿ ಶೇ.31ರಷ್ಟು ಕೊರತೆ ಕಾಣಿಸಿಕೊಂಡಿತ್ತು ಎಂದು ಕೇಂದ್ರದ ಮಾಹಿತಿ ತಿಳಿಸಿದೆ.