ಉಪಚುನಾವಣೆ: ಉಡುಪಿ ಜಿಲ್ಲೆಯಲ್ಲಿ ಶೇ.96.57 ಮತದಾನ

Update: 2024-10-21 15:13 GMT

ಉಡುಪಿ: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಇಂದು ನಡೆದ ಉಪಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸಂಸದರು, ಶಾಸಕರು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಸೇರಿದಂತೆ ಒಟ್ಟು ಶೇ.96.57 ಮಂದಿ ತಮ್ಮ ಮತವನ್ನು ಚಲಾಯಿಸಿದ್ದಾರೆ ಎಂದು ಜಿಲ್ಲೆಯ ಸಹಾಯಕ ಚುನಾವಣಾಧಿಕಾರಿ ಆಗಿರುವ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್. ತಿಳಿಸಿದ್ದಾರೆ.

ಕಸ್ತೂರಿ ರಂಗನ್ ವರದಿ ಅನುಷ್ಠಾನ ಹಾಗೂ ಅದರಿಂದ ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸರಕಾರಗಳ ಗಮನ ಸೆಳೆಯಲು ಬೈಂದೂರು ತಾಲೂಕಿನ ಜಡ್ಕಲ್ ಹಾಗೂ ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮ ಪಂಚಾಯತ್‌ಗಳ ಎಲ್ಲಾ ಸದಸ್ಯರು ಇಂದು ಮತದಾನವನ್ನು ಬಹಿಷ್ಕರಿಸಿ ತಮ್ಮ ತೀವ್ರ ಪ್ರತಿರೋಧವನ್ನು ದಾಖಲಿಸಿದರು.

ಇನ್ನುಳಿದಂತೆ ಕಸ್ತೂರಿರಂಗನ್ ವರದಿಯ ವ್ಯಾಪ್ತಿಗೆ ಬರುವ ಪಶ್ಚಿಮ ಘಟ್ಟ ವ್ಯಾಪ್ತಿಯ ಚಿತ್ತೂರು, ಆಲೂರು, ಇಡೂರು ಕುಂಜ್ಞಾಡಿ ಗ್ರಾಪಂಗಳ ಸಾಕಷ್ಟು ಸದಸ್ಯರು ಮತದಾನದಿಂದ ದೂರ ಉಳಿದರು. ಇನ್ನೂ ಹಲವು ಗ್ರಾಪಂಗಳ ಸದಸ್ಯರು ಚುನಾವಣೆ ಬಹಿಷ್ಕರಿಸುವ ನಿರ್ಧಾರ ಪ್ರಕಟಿಸಿದ್ದರೂ ಕೊನೆಯ ಕ್ಷಣಗಳಲ್ಲಿ ಬಂದು ಮತ ಚಲಾಯಿಸಿದರು ಎಂದು ತಿಳಿದುಬಂದಿದೆ.

ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ 158 ಮತಗಟ್ಟೆಗಳಲ್ಲಿ ನಡೆದ ಮತದಾನ ದಲ್ಲಿ ಮತ ಚಲಾಯಿಸುವ ಅರ್ಹತೆ ಹೊಂದಿದ್ದ ಒಟ್ಟು 2480 ಮತದಾರರ ಪೈಕಿ ಅಂತಿಮವಾಗಿ 2395 ಮಂದಿ ತಮ್ಮ ಮತಗಳನ್ನು ಚಲಾಯಿಸಿದ್ದಾರೆ. 1195 ಮಂದಿ ಪುರುಷ ಮತದಾರರ ಪೈಕಿ 1154 ಮಂದಿ ಹಾಗೂ 1285 ಮಂದಿ ಮಹಿಳಾ ಮತದಾರರ ಪೈಕಿ 1241 ಮಂದಿ ಮತ ಚಲಾಯಿಸಿದ್ದಾರೆ.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲಿ ತಮ್ಮ ಮತ ಚಲಾಯಿಸಿದರೆ, ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಉಡುಪಿ ನಗರಸಭೆಯಲ್ಲಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಕಾಪು ಪುರಸಭೆ, ಕುಂದಾಪುರ ಶಾಸಕ ಎ. ಕಿರಣ್‌ಕುಮಾರ್ ಕೊಡ್ಗಿ ಅವರು ಕುಂದಾಪುರ ಪುರಸಭೆಯಲ್ಲಿ ಹಾಗೂ ವಿ.ಸುನಿಲ್‌ಕುಮಾರ್ ಅವರು ಕಾರ್ಕಳ ಪುರಸಭೆಯಲ್ಲಿ ತಮ್ಮ ಮತಗಳನ್ನು ಚಲಾಯಿಸಿದರು.

ಉಡುಪಿ ಜಿಲ್ಲೆಯಲ್ಲಿ ನಿಧಾನಗತಿಯಲ್ಲಿ ಮತದಾನ ಪ್ರಾರಂಭಗೊಂಡಿದ್ದು, 9:30ರ ಸುಮಾರಿಗೆ ಶಾಸಕ ಯಶಪಾಲ್ ಸುವರ್ಣರ ನೇತೃತ್ವದಲ್ಲಿ ನಗರಸಭೆಯ ಬಿಜೆಪಿ ಸದಸ್ಯರೆಲ್ಲಾ ಬಂದು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ನಗರ ಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಸುಂದರ ಕಲ್ಮಾಡಿ ಸೇರಿದಂತೆ 32 ಮಂದಿ ಆಡಳಿತ ಬಿಜೆಪಿ ಸದಸ್ಯರೊಂದಿಗೆ ವಿಪಕ್ಷ ನಾಯಕ ರಮೇಶ್ ಕಾಂಚನ್ ಸೇರಿದಂತೆ ಮೂವರು ಕಾಂಗ್ರೆಸ್ ಸದಸ್ಯರೂ ತಮ್ಮ ಮತಗಳನ್ನು ನಗರಸಭೆಯಲ್ಲಿ ಚಲಾಯಿಸಿದರು.

ಕಾರ್ಕಳ ಗರಿಷ್ಠ, ಬೈಂದೂರು ಕನಿಷ್ಠ: ಜಿಲ್ಲೆಯ ಮಟ್ಟಿಗೆ ಕಾರ್ಕಳ ತಾಲೂಕಿ ನಲ್ಲಿ ಶೇ.99.28ರಷ್ಟು ಗರಿಷ್ಠ ಮತದಾನ ವಾದರೆ, ಬೈಂದೂರು ತಾಲೂಕಿನಲ್ಲಿ ಕನಿಷ್ಠ ಶೇ.88.80 ಮತದಾನವಾಗಿದೆ. ಉಡುಪಿ ಹಾಗೂ ಹೆಬ್ರಿ ತಾಲೂಕು ಗಳಲ್ಲಿ ಶೇ.99.18ರಷ್ಟು ಮತದಾನ ದಾಖಲಾಗಿದೆ. ಇನ್ನುಳಿದಂತೆ ಬ್ರಹ್ಮಾವರ ತಾಲೂಕಿನಲ್ಲಿ ಶೇ.98.83, ಕಾಪು ತಾಲೂಕಿನಲ್ಲಿ ಶೇ.97.77 ಹಾಗೂ ಕುಂದಾಪುರ ತಾಲೂಕಿನಲ್ಲಿ ಶೇ.93.59ರಷ್ಟು ಮತದಾನ ದಾಖಲಾಗಿದೆ.

ಬೈಂದೂರು ತಾಲೂಕಿನ 15 ಗ್ರಾಪಂಗಳಲ್ಲಿ 123 ಪುರುಷರ ಪೈಕಿ 110 ಮಂದಿ, 136 ಮಹಿಳೆಯರ ಪೈಕಿ 120 ಮಂದಿ ಒಟ್ಟು 259 ಮತದಾರರ ಪೈಕಿ 230 ಮಂದಿ ಮತ ಚಲಾಯಿಸಿದ್ದಾರೆ. ಕುಂದಾಪುರ ತಾಲೂಕಿನ 43 ಗ್ರಾಪಂ ಹಾಗೂ ಒಂದು ಪುರಸಭೆಯ 278 ಪುರುಷರ ಪೈಕಿ 257, 299 ಮಹಿಳೆಯರ ಪೈಕಿ 283 ಮಂದಿ ಹಾಗೂ ಒಟ್ಟು 577 ಮತದಾರ ಪೈಕಿ 540 ಮಂದಿ ಮತ ಚಲಾಯಿಸಿದ್ದಾರೆ.

ಬ್ರಹ್ಮಾವರ ತಾಲೂಕಿನ 28 ಸ್ಥಳೀಯ ಸಂಸ್ಥೆಗಳ 210 ಪುರುಷ ಸದಸ್ಯರ ಪೈಕಿ 209 ಮಂದಿ, 218 ಮಹಿಳೆಯರ ಪೈಕಿ 214, ಒಟ್ಟು 428 ಮಂದಿಯ ಪೈಕಿ 423 ಮಂದಿ ಇಂದು ಮತ ಚಲಾಯಿಸಿದ್ದಾರೆ. ಉಡುಪಿ ತಾಲೂಕಿನಲ್ಲಿ 17 ಸಂಸ್ಥೆಗಳ 179 ಪುರುಷ ಮತದಾರರ ಪೈಕಿ 176, 185 ಮಹಿಳಾ ಮತದಾರರ ಪೈಕಿ ಎಲ್ಲಾ 185 ಮಂದಿ ಹಾಗೂ ಒಟ್ಟು 364 ಮಂದಿಯ ಪೈಕಿ 361 ಮತದಾರರು ತಮ್ಮ ಮತ ಚಲಾಯಿಸಿದ್ದಾರೆ.

ಕಾಪು ತಾಲೂಕಿನ 17 ಸಂಸ್ಥೆಗಳ 148 ಪುರುಷರ ಪೈಕಿ 147 ಮಂದಿ, 166 ಮಂದಿ ಮಹಿಳೆಯರ ಪೈಕಿ 160 ಮಂದಿ, ಒಟ್ಟು 314 ಮಂದಿಯ ಪೈಕಿ 307 ಮಂದಿ ತಮ್ಮ ಮತ ಚಲಾಯಿಸಿದ್ದಾರೆ. ಹೆಬ್ರಿ ತಾಲೂಕಿನ 9 ಸ್ಥಳೀಯ ಸಂಸ್ಥೆಗಳ 57 ಪುರುಷ ಸದಸ್ಯರ ಪೈಕಿ 56 ಮಂದಿ, 65 ಮಹಿಳಾ ಸದಸ್ಯರ ಪೈಕಿ 65ಮಂದಿಯೂ ಸೇರಿ ಒಟ್ಟು 122 ಮಂದಿ ಪೈಕಿ 121 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಕಾರ್ಕಳ ತಾಲೂಕಿನ 28 ಸ್ಥಳೀಯ ಸಂಸ್ಥೆಗಳ 200 ಮಂದಿ ಪುರುಷ ಸದಸ್ಯರ ಪೈಕಿ 199, 216 ಮಹಿಳಾ ಸದಸ್ಯರ ಪೈಕಿ 214 ಸೇರಿದಂತೆ ಒಟ್ಟು 416 ಮತದಾರರ ಪೈಕಿ 413 ಮಂದಿ ಇಂದು ತಮ್ಮ ಮತವನ್ನು ಚಲಾಯಿಸಿ ದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿಯವರ ಪ್ರಕಟಣೆ ತಿಳಿಸಿದೆ.

ಜಿಲ್ಲೆಯಲ್ಲಿ ಬಿದ್ದ ಒಟ್ಟು ಮತಗಳ ವಿವರ

ತಾಲೂಕು - ಮತಗಟ್ಟ - ಒಟ್ಟು ಮತ - ಬಿದ್ದ ಮತ - ಶೇಕಡ

ಬೈಂದೂರು - 15 - 259 - 230 - 88.80

ಕುಂದಾಪುರ - 44 - 577 - 540 - 93.59

ಬ್ರಹ್ಮಾವರ  - 28 - 428 - 423 - 98.83

ಉಡುಪಿ - 17 - 364 - 361 -  99.18

ಕಾಪು - 17 - 314 - 307 - 97.77

ಹೆಬ್ರಿ - 09 - 122 - 121 -  99.18

ಕಾರ್ಕಳ - 28 - 416 - 413 - 99.28

ಒಟ್ಟು - 158 - 2480 - 2395 - 96.57






 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News