ಹದಗೆಟ್ಟ ಕಟಪಾಡಿ-ಶಿರ್ವ ರಸ್ತೆ ಮಧ್ಯೆ ಬಾಳೆ ಗಿಡ ನೆಟ್ಟು ಆಕ್ರೋಶ

Update: 2024-10-21 15:39 GMT

ಕಾಪು, ಅ.21: ಕಟಪಾಡಿ- ಶಿರ್ವ ರಾಜ್ಯ ಹೆದ್ದಾರಿ ರಸ್ತೆಯುದ್ದಕ್ಕೂ ಹೊಂಡ ಗುಂಡಿಗಳು ತುಂಬಿದ್ದು, ತೀವ್ರ ಹದಗೆಟ್ಟ ರಸ್ತೆ ಯನ್ನು ಸರಿಪಡಿಸದ ವ್ಯವಸ್ಥೆ ವಿರುದ್ಧ ಸ್ಥಳೀಯರು ರಸ್ತೆ ಮಧ್ಯೆಯೇ ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಟಪಾಡಿ ಕುರ್ಕಾಲು ಶಂಕರಪುರದಿಂದ ಶಿರ್ವ ಸಂಪರ್ಕ ರಸ್ತೆಯು ಹಲವು ತಿಂಗಳುಗಳಿಂದ ರಸ್ತೆ ಹದಗೆಟ್ಟಿದ್ದು ಇದರಿಂದಾಗಿ ಪ್ರತಿನಿತ್ಯ ವಾಹನ ಸವಾರರು ಪರದಾಡುತ್ತಿದ್ದಾರೆ. ವಾಹನ ಸವಾರರಿಗೆ ದಿನನಿತ್ಯ ಕಿರಿಕಿರಿ ಉಂಟಾಗುತ್ತಿದೆ. ಈ ಬಗ್ಗೆ ವಿವಿಧ ರೀತಿಯಲ್ಲಿ ಸರಕಾರದ ಗಮನ ಸೆಳೆದರೂ ಯಾವುದೇ ಪ್ರಯೋಜನ ಆಗಿಲ್ಲ. ಈ ರಸ್ತೆಯ ಕುರಿತ ಹಾಡು ಕೂಡ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.

ಈ ಕುರಿತು ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ ಮತ್ತು ಹೊಂಡ ಮುಚ್ಚುವ ಕಾರ್ಯಕ್ಕೂ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ರಸ್ತೆಯ ಅವ್ಯವಸ್ಥೆಯಿಂದ ತೀವ್ರ ಹತಾಶರಾದ ಸಾರ್ವಜನಿಕರು ಕಟಪಾಡಿ ಶಂಕರಪುರ ಸಮೀಪ ರಸ್ತೆ ಮಧ್ಯೆ ಇಂದು ಬೆಳ್ಳಂಬೆಳಗ್ಗೆ ರಸ್ತೆಯಲ್ಲಿದ್ದ ಹೊಂಡಕ್ಕೆ ಬಾಳೆ ಗಿಡ ನೆಟ್ಟು ಆಕ್ರೋಶ ಹೊರಹಾಕಿದ್ದಾರೆ.

ಸ್ಥಳೀಯ ಸಂಸದರು ಹಾಗೂ ಶಾಸಕರು ಇತ್ತ ಕೂಡಲೇ ಗಮನ ಹರಿಸಿ, ಈ ರಸ್ತೆಯನ್ನು ಸರಿಪಡಿಸಬೇಕು. ಬಾಳೆ ಗಿಡ ಗೊನೆ ಬಿಡುವ ಮೊದಲು ಲೋಕೋಪಯೋಗಿ ಇಲಾಖೆ ಇನ್ನಾದರೂ ಎಚ್ಚೆತ್ತುಕೊಂಡು ಈ ರಸ್ತೆಯನ್ನು ಸಂಚಾರಕ್ಕೆ ಯೋಗ್ಯ ವನ್ನಾಗಿ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News