ಕಸ್ತೂರಿ ರಂಗನ್ ವರದಿಗೆ ವಿರೋಧ: ಜಡ್ಕಲ್, ಚಿತ್ತೂರು ಗ್ರಾಪಂಗಳ ಸದಸ್ಯರಿಂದ ಚುನಾವಣೆ ಬಹಿಷ್ಕಾರ
ಉಡುಪಿ: ಪಶ್ಚಿಮಘಟ್ಟದ ಸಂರಕ್ಷಣೆಗೆ ಸಂಬಂಧಿಸಿದಂತೆ ಇರುವ ಕಸ್ತೂರಿರಂಗನ್ ವರದಿಯಲ್ಲಿ ಅತಿಸೂಕ್ಷ್ಮ ಪ್ರದೇಶದ ವ್ಯಾಪ್ತಿಯಿಂದ ತಮ್ಮ ಗ್ರಾಮಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ಬೈಂದೂರು ತಾಲೂಕಿಗೆ ಸೇರಿದ ಜಡ್ಕಲ್ ಹಾಗೂ ಕುಂದಾಪುರ ತಾಲೂಕಿಗೆ ಸೇರಿದ ಕೆರಾಡಿ ಗ್ರಾಮ ಪಂಚಾಯತ್‌ಗಳ ಎಲ್ಲಾ ಸದಸ್ಯರು ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಇಂದು ನಡೆದ ಉಪಚುನಾವಣೆಯ ಮತದಾನವನ್ನು ಬಹಿಷ್ಕರಿಸಿದರು.
ಜಡ್ಕಲ್ ಗ್ರಾಪಂನಲ್ಲಿ 9 ಮಂದಿ ಪುರುಷ ಹಾಗೂ 9 ಮಂದಿ ಮಹಿಳಾ ಸದಸ್ಯರು ಸೇರಿದಂತೆ ಒಟ್ಟು 18 ಸದಸ್ಯರಿದ್ದು, ಎಲ್ಲರೂ ಗ್ರಾಪಂ ಕಚೇರಿಯಲ್ಲಿ ತೆರೆದ ಮತಗಟ್ಟೆಯಿಂದ ದೂರ ಉಳಿದು ಮತದಾನವನ್ನು ಬಹಿಷ್ಕರಿಸಿದರು. ಅದೇ ರೀತಿ ಕೆರಾಡಿ ಗ್ರಾಪಂನ 7 ಮಂದಿ ಪುರುಷ ಹಾಗೂ 7 ಮಂದಿ ಮಹಿಳಾ ಸದಸ್ಯರು ಸೇರಿದಂತೆ ಎಲ್ಲಾ 14 ಮಂದಿ ಸದಸ್ಯರು ಮತದಾನದಿಂದ ದೂರ ಉಳಿದು ಮೊದಲೇ ಪ್ರಕಟಿಸಿದಂತೆ ಚುನಾವಣೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸಿದರು.
ಮತಗಟ್ಟೆಯಲ್ಲಿ ಚುನಾವಣಾ ಅಧಿಕಾರಿ, ಸಿಬ್ಬಂದಿಗಳಲ್ಲದೇ ಭದ್ರತಾ ಸಿಬ್ಬಂದಿಗಳು ಬೆಳಗ್ಗೆ 8ಗಂಟೆಯಿಂದ ಸಂಜೆ 4ಗಂಟೆ ಯವರೆಗೆ ಮತದಾರರ ಆಗಮನಕ್ಕಾಗಿ ಕಾದು ಕುಳಿತರೂ ಯಾರೊಬ್ಬ ಸದಸ್ಯರು ತಾವು ಪ್ರತಿದಿನ ಭೇಟಿ ನೀಡುವ ಗ್ರಾಪಂಗೆ ಆಗಮಿಸಲಿಲ್ಲ.
ಗ್ರಾಮದ ಜನತೆ ಸೇರಿ ತೆಗೆದುಕೊಂಡ ಒಮ್ಮತದ ನಿರ್ಧಾರದಂತೆ ಅವರಿಂದ ಆಯ್ಕೆಯಾದ ನಾವು ಕಸ್ತೂರಿರಂಗನ್ ವರದಿಯಿಂದ ತಮ್ಮ ಗ್ರಾಮವನ್ನು ಕೈಬಿಡಬೇಕೆಂದು ಆಗ್ರಹಿಸಿ ಚುನಾವಣೆಯನ್ನು ಬಹಿಷ್ಕರಿಸಿದ್ದೇವೆ. ಇಂದು ಎಲ್ಲಾದರೂ ನಾವು ಗ್ರಾಪಂ ಬಳಿ ಸುಳಿದರೆ ತಮ್ಮನ್ನು ಧಿಕ್ಕರಿಸಿದ್ದೇವೆಂದು ಗ್ರಾಮಸ್ಥರು ಭಾವಿಸಬಹುದೆಂಬ ಕಾರಣದಿಂದ ನಾವು ಮತಗಟ್ಟೆಯಿರುವ ಗ್ರಾಪಂಗೆ ಬರುತ್ತಿಲ್ಲ ಎಂದು ಜಡ್ಕಲ್‌ನ ಸದಸ್ಯೆಯೊಬ್ಬರು ದೂರವಾಣಿ ಮೂಲಕ ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದರು.
ಅಧ್ಯಕ್ಷರ ಹೇಳಿಕೆ: ಜಡ್ಕಲ್ ಮತ್ತು ಮುಧೂರು ಗ್ರಾಮಗಳು ಜಡ್ಕಲ್ ಗ್ರಾಪಂ ವ್ಯಾಪ್ತಿಗೆ ಸೇರಿವೆ. ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಗೆ ಈ ಎರಡೂ ಗ್ರಾಮಗಳು ಸೇರಿವೆ. ಇದರಿಂದಾಗಿ ಈಗೀಗ ನಮಗೆ ತುಂಬಾ ಸಮಸ್ಯೆ ಗಳಾಗುತ್ತಿವೆ. ಈಗಾಗಲೇ ಗ್ರಾಪಂಗೆ ಸಲ್ಲಿಸಿ ಕಂದಾಯ ಇಲಾಖೆಗೆ ರವಾನಿಸಿರುವ 25-30 ಭೂಪರಿವರ್ತನೆಯ ಪೈಲ್‌ಗಳು ತಡೆ ಹಿಡಿಯಲ್ಪಟ್ಟಿವೆ ಎಂದು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿಸಿದಾಗ ಜಡ್ಕಲ್ ಗ್ರಾಪಂ ಅಧ್ಯಕ್ಷೆ ಪಾರ್ವತಿ ಈ ವರದಿಗಾರನಿಗೆ ತಿಳಿಸಿದರು.
ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದಂತೆ ನಮ್ಮ ಗ್ರಾಪಂನಲ್ಲಿ ಬೃಹತ್ ಪ್ರತಿಭಟನೆಯಾಗಿದೆ. ವರದಿಯಿಂದ 6800 ಜನಸಖ್ಯೆಯ ಈ ಗ್ರಾಮಗಳನ್ನು ಕೈಬಿಡುವಂತೆ ಜನ ಒಕ್ಕೊರಲಿನಿಂದ ನಿರ್ಧರಿಸಿದ್ದಾರೆ. ಇದೇ ಕಾರಣದಿಂದ ಚುನಾವಣೆ ಬಹಿಷ್ಕರಿಸಲು ನಾವು ನಿರ್ಧರಿಸಿದ್ದೇವೆ ಎಂದು ಪಾರ್ವತಿ ವಿವರಿಸಿದರು.
ಎಡಿಸಿ, ಎಸಿ ಭೇಟಿ: ನಿರ್ಧಾರವನ್ನು ಮರುಪರಿಶೀಲಿಸಿ ಚುನಾವಣೆಯಲ್ಲಿ ಮತ ಚಲಾಯಿಸುವಂತೆ ಮನವೊಲಿಸಲು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಹಾಗೂ ಕುಂದಾಪುರ ಎಸಿ ಮಹೇಶ್ಚಂದ್ರ ಅವರು ನಿನ್ನೆ ಗ್ರಾಪಂಗೆ ಭೇಟಿ ನೀಡಿ ಮಾತನಾ ಡಿದ್ದರು. ಆದರೆ ವರದಿಯಿಂದ ನಮ್ಮ ಗ್ರಾಮಗಳನ್ನು ಕೈಬಿಡುವ ಬಗ್ಗೆ ಅವರು ಯಾವುದೇ ಪ್ರಸ್ತಾಪ ಮಾಡಲಿಲ್ಲ. ಹೀಗಾಗಿ ನಾವು ಎಲ್ಲಾ 18 ಸದಸ್ಯರು ಮತದಾನ ಬಹಿಷ್ಕಾರದ ನಿರ್ಧಾರದಲ್ಲಿ ಅಚಲರಾಗಿ ದ್ದೇವೆ ಎಂದು ಅವರು ತಿಳಿಸಿದರು.
ಕೆರಾಡಿಯಲ್ಲೂ ಗ್ರಾಮದ ಜನರ ನಿಲುವಿಗೆ ಬದ್ದರಾಗಿ ಅಲ್ಲಿನ ಎಲ್ಲಾ 14 ಮಂದಿ ಸದಸ್ಯರು ಮತದಾನದಿಂದ ದೂರ ಉಳಿದರು. ಸದಸ್ಯರು ಸೇರಿದ ವಿವಿಧ ಪಕ್ಷಗಳ ನಾಯಕರ ಒತ್ತಡವಿದ್ದರೂ ತಮ್ಮನನ್ನು ಆಯ್ಕೆ ಮಾಡಿದ ಜನರ ನಿರ್ಧಾರಕ್ಕೆ ನಾವು ಒತ್ತಾಸೆಯಾಗಿ ನಿಂತಿದ್ದೇವೆ ಎಂದು ಸದಸ್ಯರೊಬ್ಬರು ತಿಳಿಸಿದರು.
ಇನ್ನುಳಿದಂತೆ ಕುಂದಾಪುರದ ಇಡೂರು ಕುಂಜ್ಞಾಡಿಯಲ್ಲೂ ಅಪರಾಹ್ನ 2:00ಗಂಟೆ ಯವರೆಗೆ 12 ಮಂದಿ ಸದಸ್ಯರಲ್ಲಿ ಯಾರೊಬ್ಬರೂ ಮತದಾನ ಮಾಡಿರಲಿಲ್ಲ. ಆದರೆ ಅಪರಾಹ್ನದ ಬಳಿಕ ಎಂಟು ಮಂದಿ ಬಂದು ಇಲ್ಲಿ ಮತ ಚಲಾಯಿಸಿ ದ್ದಾರೆ. ಹೀಗಾಗಿ ಇಲ್ಲಿ ಶೇ.66.67 ಮತದಾನವಾಗಿದೆ.
ಕುಂದಾಪುರ ತಾಲೂಕಿನ ಚಿತ್ತೂರು ಗ್ರಾಪಂನಲ್ಲೂ ಅಪರಾಹ್ನ 1:30ಕ್ಕೆ ವರದಿಗೆಂದು ಉಡುಪಿಯ ಪತ್ರಕರ್ತರು ತೆರಳಿ ದಾಗ ಯಾರೊಬ್ಬರೂ ಮತ ಚಲಾಯಿಸಿರಲಿಲ್ಲ. ಆದರೆ 3ಗಂಟೆಯ ಬಳಿಕ ಇಬ್ಬರು ಮಹಿಳಾ ಸದಸ್ಯರು ಪಕ್ಷದ ನಿರ್ದೇಶನ ದಂತೆ ಬಂದು ಮತ ಚಲಾಯಿಸಿದ್ದಾರೆ ಎಂದು ಅಧ್ಯಕ್ಷ ರವೀಂದ್ರ ಶೆಟ್ಟಿ ತಿಳಿಸಿದರು. ಹೀಗಾಗಿ ಎಂಟು ಸದಸ್ಯರ ಈ ಗ್ರಾಪಂನಲ್ಲಿ ಶೇ.25ರಷ್ಟು ಮತದಾನವಾಗಿದೆ.
ನಮ್ಮ ಇಡೀ ಗ್ರಾಮ ಕಸ್ತೂರಿರಂಗನ್ ವರದಿಯ ಅತಿ ಸೂಕ್ಷ್ಮ ವಲಯದಲ್ಲಿದೆ. ಇಲ್ಲಿ ಆಸ್ಪತ್ರೆಯೊಂದರ ನಿರ್ಮಾಣಕ್ಕೆ ಎನ್‌ಓಸಿಗೆಂದು ಕಳುಹಿಸಿ ಫೈಲ್ ಅರಣ್ಯ ಇಲಾಖೆಯಲ್ಲಿ ಅನುಮತಿಗಾಗಿ ಕಾಯುತ್ತಿದೆ. ಭೂಪರಿವರ್ತನೆಗೆ ಇನ್ನೂ ಅನುಮತಿ ಸಿಕ್ಕಿಲ್ಲ. ರಾಜ್ಯ ಸರಕಾರ ವರದಿ ತಿರಸ್ಕರಿಸಿದ್ದರೂ, ವರದಿಯ ಪರಿಣಾಮ ಗ್ರಾಮಗಳಲ್ಲಿ ಗೋಚರಿಸುತ್ತಿವೆ ಎಂದು ಅವರು ಹೇಳಿದರು.
ಹುಲಿ ಯೋಜನೆ: ಕೇಂದ್ರ ಸರಕಾರದ ಇದುವರೆಗೆ ಐದು ಬಾರಿ ಅಧಿಸೂಚನೆ ಹೊರಡಿಸಿರ ಬಹುದು. ಆದರೆ ಇದೀಗ ಆರನೇ ಅಧಿಸೂಚನೆಯ ಬಳಿಕ ಗ್ರಾಮ ಮಟ್ಟದಲ್ಲಿ ಅದರ ಪರಿಣಾಮ ಗೋಚರಿಸುತ್ತಿವೆ. ಇದು ಜನರಿಗೆ ಹಾಗೂ ಗ್ರಾಪಂಗೆ ಸಮಸ್ಯೆಯೊಡ್ಡುತ್ತಿದೆ. ಅಲ್ಲದೇ ಮೂಕಾಂಬಿಕಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಹುಲಿ ಯೋಜನೆಯೂ ಜಾರಿಯಾಗುತ್ತಿದೆ ಎಂದು ಜನ ಭಯಬಿದ್ದಿದ್ದಾರೆ ಎಂದು ರವೀಂದ್ರ ಶೆಟ್ಟಿ ತಿಳಿಸಿದರು.
ಬೈಂದೂರು ತಾಲೂಕಿನ ಗೋಳಿಹೊಳೆ ಪಂಚಾಯತ್‌ನಲ್ಲಿ 16 ಮಂದಿ ಸದಸ್ಯರಿದ್ದು, ಇವರಲ್ಲಿ ಐವರು ಮಾತ್ರ (ಶೇ.31.30) ಮತ ಚಲಾಯಿಸಿದ್ದಾರೆ. ಆಲೂರು ಗ್ರಾಪಂನಲ್ಲೂ 14 ಸದಸ್ಯರಲ್ಲಿ ಐವರು (ಶೇ.35.71) ಮಾತ್ರ ಮತ ಹಾಕಿದ್ದಾರೆ.
ಒಟ್ಟಾರೆಯಾಗಿ ಬೈಂದೂರು ತಾಲೂಕಿನ 15 ಗ್ರಾಪಂಗಳಲ್ಲಿ 13ರಲ್ಲಿ ಶೇ.100ರಷ್ಟು ಮತ ಚಲಾವಣೆಯಾಗಿದ್ದರೆ, ಗೋಳಿಹೊಳೆಯಲ್ಲಿ ಶೇ.31.30 ಹಾಗೂ ಜಡ್ಕಲ್‌ನಲ್ಲಿ ಶೇ.0 ಮತ ಚಲಾವಣೆಯಾಗಿದೆ ಎಂದು ತಹಶೀಲ್ದಾರ್ ಪ್ರದೀಪ್ ತಿಳಿಸಿದರು. ಕುಂದಾಪುರ ತಾಲೂಕಿನ 43 ಗ್ರಾಪಂಗಳ ಪೈಕಿ 36ರಲ್ಲಿ ಶೇ.100ರಷ್ಟು ಮತ ಚಲಾವಣೆಯಾಗಿದೆ ಎಂದು ತಹಶೀಲ್ದಾರ್ ಶೋಭಾಲಕ್ಷ್ಮಿ ತಿಳಿಸಿದರು.
ಕಸ್ತೂರಿರಂಗನ್ ವರದಿ ವ್ಯಾಪ್ತಿಗೆ ಬರುವ ಕೆರಾಡಿ, ಚಿತ್ತೂರು, ಆಲೂರು, ಇಡೂರು ಕುಂಜ್ಞಾಡಿ ಹೊರತು ಪಡಿಸಿ ಕಟ್ ಬೆಲ್ತೂರು ಗ್ರಾಪಂನಲ್ಲಿ 13 ಸದಸ್ಯರಲ್ಲಿ ಇಬ್ಬರು (ಶೇ.84.62), ಆನಗಳ್ಳಿ ಗ್ರಾಪಂನಲ್ಲಿ 8ರಲ್ಲಿ ಒಬ್ಬರು (ಶೇ.87.5) ಹಾಗೂ ಬೀಜಾಡಿ ಗ್ರಾಪಂನ 16ರಲ್ಲಿ ಒಬ್ಬ ಸದಸ್ಯರು (ಶೇ.93.75) ಗೈರುಹಾಜರಾಗಿದ್ದಾರೆ.