ಸ್ಥಳೀಯ ವಾಣಿಜ್ಯ ವಾಹನಗಳಿಗೆ ಟೋಲ್ ಶುಲ್ಕ: ಚಾಲಕ, ಮಾಲಕರಿಂದ ಸಾಸ್ತಾನ ಟೋಲ್ ಗೇಟ್‌ಗೆ ಮುತ್ತಿಗೆ

Update: 2024-12-22 15:28 GMT

ಕೋಟ, ಡಿ.22: ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿರುವ ವಾಣಿಜ್ಯ ವಾಹನಗಳಿಗೆ ಸಾಸ್ತಾನ ಟೋಲ್ ಗೇಟ್‌ನಲ್ಲಿ ಶುಲ್ಕ ವಿಧಿಸುತ್ತಿರುವ ಕ್ರಮವನ್ನು ವಿರೋಧಿಸಿ ರವಿವಾರ ಪ್ರತಿಭಟನೆ ನಡೆಸಲಾಯಿತು.

ಸಾಸ್ತಾನ ಟೋಲ್ ಕೇಂದ್ರಕ್ಕೆ ಮುತ್ತಿಗೆ ಹಾಕಿದ ವಾಹನ ಚಾಲಕರು ಮತ್ತು ಮಾಲಕರು ಹಾಗೂ ಸಾರ್ವಜನಿಕರು ಜಿಲ್ಲಾಡ ಳಿತ ಮತ್ತು ಟೋಲ್ ಕೇಂದ್ರದ ವಿರುದ್ಧ ದಿಕ್ಕಾರ ಕೂಗಿದರು. ಈ ಸಂದರ್ಭ ಸ್ಥಳದಲ್ಲಿ ಆಗಮಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆದರು.

ಬಹಳಷ್ಟು ಸಮಯ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಂಸದರು ವಾಹನ ಮಾಲೀಕರ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಇಲ್ಲಿ ಮೀನು ಮಾರುಕಟ್ಟೆಗೆ ಹೋಗಬೇಕಾದರೂ ಟೋಲ್ ಕೊಟ್ಟು ಹೋಗಬೇಕು. ವಾಹನಕ್ಕೆ ಪೆಟ್ರೋಲ್ ಹಾಕಬೇಕಾದರೂ ಟೋಲ್ ಕೊಟ್ಟು ಹೋಗ ಬೇಕಾದಂತಹ ಪರಿಸ್ಥಿತಿಯಲ್ಲಿ ಟೋಲ್ ಸಂಗ್ರಹ ಎನ್ನುವುದು ಸರಿಯಲ್ಲ. ಮೊದಲಿನಂತೆ ಕೋಟ ಜಿಪಂ ವ್ಯಾಪ್ತಿಯಲ್ಲಿ ಟೋಲ್ ವಿನಾಯತಿ ನೀಡಬೇಕೆಂದು ಜಿಲ್ಲಾಧಿಕಾರಿ ಗಳಿಗೆ ಸೂಚಿಸಿದರು.

ಇದಕ್ಕೆ ಒಪ್ಪದ ಜಿಲ್ಲಾಧಿಕಾರಿಗಳು ವಾಣಿಜ್ಯ ವಾಹನಗಳಿಗೆ ಟೋಲ್ ವಿನಾಯತಿ ನೀಡಲು ಸಾಧ್ಯ ಇಲ್ಲ ಎಂದರು. ಇದರಿಂದ ಪ್ರತಿಭಟನೆ ಕಾವು ಮತ್ತಷ್ಟು ಹೆಚ್ಚಿತು. ನಂತರ ಸ್ಥಳಕ್ಕಾಗಮಿಸಿದ ಕುಂದಾಪುರ ಉಪ ವಿಭಾಗಧಿಕಾರಿ ಮಹೇಶ್ ಚಂದ್ರ, ಸಂಸದರೊಂದಿಗೆ ಚರ್ಚೆ ನಡೆಸಿದರು. ಇಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ ಸಂಸದರು ಟೋಲ್ ಗೇಟ್ ಪಕ್ಕದಲ್ಲಿ ಸರ್ವಿಸ್ ರಸ್ತೆ ನೀಡಬೇಕು ಆ ರಸ್ತೆ ಕೂಡ ಇಲ್ಲಿಲ್ಲ, ಟೋಲ್ ಪಡೆಯುತ್ತಿರಿ ಎಂದರೆ ಯಾವ ಆಧಾರದಲ್ಲಿ ಪಡೆಯುತ್ತಿರಿ? ಎಂದು ಪ್ರಶ್ನಿಸಿದರು.

ಬಹಳಷ್ಟು ಚರ್ಚೆ ಬಳಿಕ ಡಿ.30ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆಯುವ ಬಗ್ಗೆ ನಿರ್ಧರಿಸಲಾಯಿತು. ಅಲ್ಲಿಯ ವರೆಗೆ ಟೋಲ್ ವಿನಾಯಿತಿ ಯನ್ನು ಮುಂದುವರಿಸುವುದಾಗಿ ಸೂಚನೆ ನೀಡಲಾಯಿತು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈ ಬಿಡಲಾಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News