ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ಗಳನ್ನು ನೇಮಿಸಿಕೊಂಡಲ್ಲಿ ಕಠಿಣ ಕಾನೂನು ಕ್ರಮ: ಡಿಸಿ ವಿದ್ಯಾಕುಮಾರಿ
ಉಡುಪಿ: ಮ್ಯಾನ್‌ಹೋಲ್‌ಗಳಿಗೆ ಇಳಿದು ಮಾನವ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಪದ್ಧತಿಗೆ ದೇಶದಾದ್ಯಂತ ನಿರ್ಬಂಧ ಹೇರಲಾಗಿದ್ದು, ಇದನ್ನು ಉಲ್ಲಂಘಿಸಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ಗಳನ್ನು ನೇಮಿಸಿಕೊಂಡಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಕಠಿಣ ಕಾನೂನು ಕ್ರಮ ಕೈಗೊಳ್ಳ ಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ತಿಳಿಸಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿ ಗಳ ಜಿಲ್ಲಾ ಜಾಗೃತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ನಗರ ಹಾಗೂ ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಮ್ಯಾನುಯಲ್ ಸ್ಕಾವೆಂಜರ್ಸ್ ಹಾಗೂ ಅನೈರ್ಮಲ್ಯ ಶೌಚಾಲಯಗಳ ಕುರಿತು ಸಮೀಕ್ಷೆ ನಡೆಸಲಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ಯಾವುದೇ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಪ್ರಕರಣಗಳು ಕಂಡು ಬಂದಿಲ್ಲ ಎಂದರು.
ಸಫಾಯಿ ಕರ್ಮಚಾರಿಗಳ ಶ್ರೇಯೋಭಿವೃದ್ಧಿಗೆ ಸರಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಬಗ್ಗೆ ಅವರು ಗಳಿಗೆ ಮಾಹಿತಿ ತಲುಪಿಸುವುದರೊಂದಿಗೆ ಯೋಜನೆಯ ಫಲನುಭವಿಗಳನ್ನಾಗಿ ಮಾಡಿ ಅವರುಗಳನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕು ಎಂದು ಅವರು ಹೇಳಿದರು.
ಜಿಲ್ಲೆಯ ನಗರ ಅಥವಾ ಗ್ರಾಮೀಣ ಭಾಗದ ಯಾವುದೇ ಮನೆ, ಕಂಪೆನಿ, ಆಸ್ಪತ್ರೆ, ಅಪಾರ್ಟ್‌ಮೆಂಟ್ ಸೇರಿದಂತೆ ಯಾವುದೇ ಕಡೆಗಳಲ್ಲಿ ಮ್ಯಾನ್ ಹೋಲ್, ಸೆಪ್ಟಿಕ್ ಟ್ಯಾಂಕ್, ತೆರೆದ ಚರಂಡಿ, ಪಿಟ್ ಗುಂಡಿ ಕಟ್ಟಿಕೊಂಡಲ್ಲಿ ಅದನ್ನು ಸ್ವಚ್ಛಗೊಳಿಸಲು ಸಕ್ಕಿಂಗ್ ಯಂತ್ರಗಳನ್ನೇ ಬಳಸಬೇಕು. ಈ ಬಗ್ಗೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತೆರೆಯಲಾದ ಸಹಾಯ ವಾಣಿಗಳನ್ನು ಸಂಪರ್ಕಿಸುವಂತೆ ಘನ ತ್ಯಾಜ್ಯ ವಿಲೇವಾರಿ ವಾಹನ ಹಾಗೂ ಧ್ವನಿ ವರ್ಧಕಗಳ ಮೂಲಕ ವ್ಯಾಪಕ ಪ್ರಚಾರ ಮಾಡಬೇಕು. ಆ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.
ಪೌರಕಾರ್ಮಿಕರ ಆರೋಗ್ಯ ತಪಾಸಣೆ
ಪೌರ ಕಾರ್ಮಿಕರುಗಳು ದೈನಂದಿನ ಸ್ವಚ್ಛತಾ ಕೆಲಸಗಳನ್ನು ನಿರ್ವಹಿಸುವಾಗ ತಪ್ಪದೆ ಕಡ್ಡಾಯವಾಗಿ ಸುರಕ್ಷತಾ ಪರಿಕರಗಳನ್ನು ಧರಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು. ಇದರ ಬಳಕೆಯ ಬಗ್ಗೆ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರುಗಳು ಹಾಗ ಅರೋಗ್ಯ ನಿರೀಕ್ಷಕರುಗಳು ಸ್ಥಳ ಪರಿಶೀಲನೆ ಮಾಡಿ ಖಾತ್ರಿ ಪಡಿಸಿಕೊಳ್ಳಬೇಕು ಎಂದರು.
ಪೌರ ಕಾರ್ಮಿಕರಗಳ ಆರೋಗ್ಯದ ಹಿತದೃಷ್ಟಿಯಿಂದ ಪೌರಾಡಳಿತ ನಿರ್ದೇಶನದಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮತ್ತು ಮಾಸ್ಟರ್ ಹೆಲ್ತ್ ಚೆಕ್ ಅಪ್ ಮಾಡಿಸಬೇಕು. ಈ ಬಗ್ಗೆ ಪ್ರತಿ ತ್ರೈಮಾಸಿಕ ಸಭೆಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮಾಹಿತಿ ನೀಡಬೇಕು. ಪೌರಕಾರ್ಮಿಕರು ಗಳಿಗೆ ಗುಣಮಟ್ಟದ ಪೌಷ್ಟಿಕ ಉಪಹಾರವನ್ನು ಸಹ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಗುರುತಿಸಲಾದ ಹಾಗೂ ಮೃತಪಟ್ಟ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಳ ಕುಟುಂಬದ ಅವಲಂಬಿತರಿಗೆ ಗುರುತಿನ ಚೀಟಿ, ಒಂದು ಬಾರಿ ನಗದು ಸಹಾಯ, ಮನೆ, ನಿವೇಶನ, ಶಿಕ್ಷಣ, ವಿದ್ಯಾರ್ಥಿ ವೇತನ, ಉದ್ಯೋಗ ನೀಡುವುದರೊಂದಿಗೆ ಅವರುಗಳಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದರು.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಗಳ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಮಾನ್ಯುಯಲ್ ಸ್ಕ್ಯಾವೆಂಜರ್ಸ್ ಮತ್ತು ಪೌರ ಕಾರ್ಮಿಕರ ಮಕ್ಕಳಿಗೆ ಶೇ.5ರಷ್ಟು ಪ್ರವೇಶ ನೀಡಲಾಗುವುದು, 6ರಿಂದ 10 ನೇ ತರಗತಿ ವರೆಗೆ ಉಚಿತ ಆಂಗ್ಲ ಮಾಧ್ಯಮ ಶಿಕ್ಷಣ, ಊಟ, ವಸತಿ ಸೇರಿದಂತೆ ಇತರೆ ಸೌಲಭ್ಯಗಳೊಂದಿಗೆ ಪ್ರವೇಶ ಪರೀಕ್ಷೆಯನ್ನು ಬರೆಯದೆ ನೇರವಾಗಿ ವಸತಿ ಶಾಲೆಗಳಲ್ಲಿ ದಾಖಲಾತಿ ಮಾಡಿಕೊಳ್ಳಲು ಅವಕಾಶವಿದೆ. ಈ ಕುರಿತು ಪೌರ ಕಾರ್ಮಿಕರು ಹಾಗೂ ಸ್ವಚ್ಛತಾ ಕಾರ್ಮಿಕರುಗಳಿಗೆ ಮಾಹಿತಿ ನೀಡಬೇಕು ಎಂದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಉಪ ನಿರ್ದೇಶಕ ನಾರಾಯಣ ಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ.ಗಡಾದ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು, ಜಿಲ್ಲಾ ಮಟ್ಟದ ಅನುಷ್ಠಾನ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸರಿಯಾದ ಸಮಯಕ್ಕೆ ವೇತನ ಪಾವತಿ
ನಗರ ಸ್ಥಳೀಯ ಸಂಸ್ಥೆ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು, ಲೋಡರ್ಸ್, ಕ್ಲಿನರ್ಸ್ ಹಾಗೂ ಚಾಲಕರುಗಳಿಗೆ ಪ್ರತಿ ತಿಂಗಳ ವೇತನವನ್ನು ಸರಿಯಾದ ಸಮಯಕ್ಕೆ ಪಾವತಿ ಆಗುತ್ತಿರುವ ಬಗ್ಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಡಿಸಿ ವಿದ್ಯಾ ಕುಮಾರಿ ತಿಳಿಸಿದರು.
ಪ್ರಧಾನ ಮಂತ್ರಿ ಜ್ಯೋತಿ ಭಿಮಾ ಯೋಜನೆಯಡಿ ವಾರ್ಷಿಕ 450ರೂ. ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ವರ್ಷಕ್ಕೆ 20 ರೂ ಗಳನ್ನು ಪಾವತಿಸಿದ್ದಲ್ಲಿ, ಅಪಘಾತ ಅಥವಾ ಮರಣ ಹೊಂದಿದ ಪಕ್ಷದಲ್ಲಿ ಕುಟುಂಬ ದವರಿಗೆ 2 ಲಕ್ಷ ರೂ. ಪರಿಹಾರ ಮೊತ್ತ ದೊರಕಲಿದೆ. ಎಲ್ಲಾ ಅಧಿಕಾರಿಗಳು ತಮ್ಮ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಈ ಯೋಜನೆಯನ್ನು ಮಾಡಿಸಬೇಕು ಎಂದು ಅವರು ತಿಳಿಸಿದರು.