ವಿಶ್ವಕರ್ಮ ಯೋಜನೆ| ಅರ್ಜಿಗಳನ್ನು ಸಕಾರಣವಿಲ್ಲದೇ ತಿರಸ್ಕರಿಸಬೇಡಿ: ಬ್ಯಾಂಕರ್‌ಗಳಿಗೆ ಸಂಸದ ಕೋಟ ಸೂಚನೆ

Update: 2024-12-22 14:15 GMT

ಉಡುಪಿ: ಬಡವರಿಗೆ ಹಾಗೂ ವಿವಿಧ ವೃತ್ತಿಯಲ್ಲಿರುವವರಿಗೆ ಸ್ವಉದ್ಯೋಗ ಕೈಗೊಳ್ಳಲು ಪ್ರೋತ್ಸಾಹ ನೀಡುವ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ವಿವಿಧ ಕೌಶಲ್ಯ ತರಬೇತಿ ಪಡೆದ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಸಕಾರಣ ವಿಲ್ಲದೇ ತಿರಸ್ಕರಿಸದಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಜಿಲ್ಲೆಯ ವಿವಿಧ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವತಿಯಿಂದ ಆಯೋಜಿಸ ಲಾದ ಜಿಲ್ಲಾ ಬ್ಯಾಂಕರ್‌ಗಳ ಪ್ರಗತಿ ಪರಿಶೀಲನಾ ಸಭೆಯ ವೇಳೆ ಕೇಂದ್ರ ಸರಕಾರದ ಪಿ.ಎಂ.ವಿಶ್ವಕರ್ಮ ಹಾಗೂ ಪಿ.ಎಂ.ಸ್ವನಿಧಿ ಯೋಜನೆಗಳ ಪ್ರಗತಿ ಪರಿಶೀಲನೆ ವೇಳೆ ಅವರು ಮಾತನಾಡುತಿದ್ದರು.

ವಿಶ್ವಕರ್ಮ ಯೋಜನೆಯಡಿ ತರಬೇತಿ ಪಡೆದ ಫಲಾನುಭವಿಗಳು ವಿವಿಧ ಚಟುವಟಿಕೆಗಳನ್ನು ನಡೆಸಲು ಬ್ಯಾಂಕುಗಳು ಆರ್ಥಿಕ ನೆರವು ನೀಡಲು ಶಿಫಾರಸ್ಸು ಆದ ಎಲ್ಲಾ ಅರ್ಜಿಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡುವಂತೆಯೂ ಅವರು ಬ್ಯಾಂಕಿನ ಅಧಿಕಾರಿಗಳಿಗೆ ಸೂಚಿಸಿದರು.

ಫಲಾನುಭವಿಗಳು ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ ಬ್ಯಾಂಕ್ ಅಧಿಕಾರಿಗಳು ಅವರೊಂದಿಗೆ ಕಟುವಾಗಿ ವರ್ತಿಸಬಾರದು. ಸಾಲಕ್ಕಾಗಿ ಅವರನ್ನು ಸತಾಯಿಸಬಾರದು. ವಿನಾ ಕಾರಣ ಅರ್ಜಿಗಳನ್ನು ತಿರಸ್ಕರಿಸಬಾರದು. ಎಲ್ಲಕ್ಕಿಂತ ಹೆಚ್ಚಾಗಿ ಅವರಿಗೆ ಕನ್ನಡದಲ್ಲೇ ಮಾಹಿತಿಗಳನ್ನು ನೀಡಲು ವ್ಯವಸ್ಥೆ ಮಾಡಬೇಕು. ಸಂಬಂಧಿತ ಅಧಿಕಾರಿಗೆ ಕನ್ನಡ ಬಾರದಿದ್ದರೆ, ಕನ್ನಡ ಬಲ್ಲ ಸಿಬ್ಬಂದಿಯ ನೆರವನ್ನು ಪಡೆಯಬೇಕು ಎಂದೂ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ದುಬಾರಿ ಸ್ಟಾಂಪ್‌ಫೀ ಸಲ್ಲ: ಜಿಲ್ಲೆಯ ಕೆಲವು ಬ್ಯಾಂಕುಗಳು ಪಿಎಂ ವಿಶ್ವಕರ್ಮ ಯೋಜನೆಯಡಿ ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡುವ ಸಂದರ್ಭದಲ್ಲಿ ದುಬಾರಿ ಸ್ಟಾಂಪ್ ಶುಲ್ಕವನ್ನು ಪಡೆಯುತ್ತಿದ್ದಾರೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ ಎಂದು ಲೋಕಸಭಾ ಸದಸ್ಯರು ತಿಳಿಸಿದರು.

ಯೋಜನೆಗೆ ನಿಗದಿತ ಸ್ಟಾಂಪ್ ಪೇಪರ್ ಮೌಲ್ಯ 500ರೂ. ಇದ್ದರೂ ಕೆಲವು ಬ್ಯಾಂಕ್‌ಗಳು 2000ರೂ. ಪಡೆಯುತ್ತಿರುವ ಬಗ್ಗೆ ಅನೇಕರು ಲಿಖಿತ ವಾಗಿ ದೂರು ನೀಡಿದ್ದಾರೆ.ಈ ಬಗ್ಗೆ ಕೂಡಲೇ ಕ್ರಮತೆಗೆದುಕೊಳ್ಳುವಂತೆ ಕೋಟ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಅವರಿಗೆ ಸೂಚಿಸಿದರು. ಎಲ್ಲಾ ಬ್ಯಾಂಕ್‌ಗಳು 500 ರೂ. ಮಾತ್ರ ಸ್ಟ್ಯಾಂಪ್ ಶುಲ್ಕ ಪಡೆಯುವಂತೆ ಸೂಚನೆ ನೀಡಲಾಗುವುದು ಎಂದು ಹರೀಶ್ ಭರವಸೆ ನೀಡಿದರು.

ಪಿಎಂ ಶ್ವಕರ್ಮ ಯೋಜನೆಯಡಿ ಆರ್ಥಿಕ ನೆರವು ಕೋರಿ ಬ್ಯಾಂಕುಗಳಿಗೆ ಹೋದ ಸಂದರ್ಭದಲ್ಲಿ ಅಲ್ಲಿನ ಮ್ಯಾನೇಜರ್ ಗಳು ಸ್ಥಳೀಯ ಕನ್ನಡ ಭಾಷೆ ಬಾರದೇ ಅರ್ಹ ಫಲಾನುಭಗಳಿಗೆ ನೆರವು ಪಡೆಯಲು ತೊಂದರೆ ಆಗುತ್ತಿದೆ. ಭಾಷೆ ಸಮಸ್ಯೆ ಗಳಿದ್ದಲ್ಲಿ ಬ್ಯಾಂಕ್ ನ ಇತರೆ ಸಿಬ್ಬಂದಿಗಳ ಸಹಾಯದಿಂದ ಸಂವಹನ ನಡೆಸಿ, ಅವರುಗಳಿಗೆ ಸಹಾಯ ಮಾಡಬೇಕು ಎಂದರು.

ಪಿಎಂ ಯೋಜನೆಯಡಿ 17000 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅವುಗಳಲ್ಲಿ 15 ಸಾವಿರ ಅರ್ಜಿಗಳು ಕ್ರಮಬದ್ಧವಾಗಿವೆ. ಇವುಗಳ ಪರಿಶೀಲನೆ ಬಳಿಕ 8438 ಅರ್ಜಿಗಳನ್ನು ರಾಜ್ಯಕ್ಕೆ ಶಿಫಾರಸ್ಸು ಮಾಡಲಾಗಿದೆ. ರಾಜ್ಯದಿಂದ 4476 ಅರ್ಜಿಗಳು ಅನುಮೋದನೆಗೊಂಡ ಬಂದಿವೆ. ಇದರಂತೆ ಒಟ್ಟು 4256 ಮಂದಿ ಒಟ್ಟು 18 ವಿಧದ ಸಾಂಪ್ರದಾಯಿಕ ಕೌಶಲ್ಯದಲ್ಲಿ ತರಬೇತಿ ಪಡೆದಿದ್ದಾರೆ ಎಂದು ಯೋಜನೆಯ ನೋಡಲ್ ಅಧಿಕಾರಿ ವಿವರಿಸಿದರು.

ನವೆಂಬರ್ 4ರವರೆಗೆ ತರಬೇತಿ ಪಡೆದ 4256 ಮಂದಿಯಲ್ಲಿ 1290 ಮಂದಿಗೆ ಸಾಲ ಮಂಜೂರಾಗಿದೆ. 2200 ಅರ್ಜಿ ಗಳು ಪೋರ್ಟಲ್‌ನಲ್ಲಿ ಬಂದಿದೆ. ಇನ್ನು 904 ಅರ್ಜಿಗಳು ಬಾಕಿ ಇದ್ದು, 677 ಅರ್ಜಿಗಳನ್ನು ವಿವಿಧ ಕಾರಣಗಳ ಮೇಲೆ ತಿರಸ್ಕೃರಿಸಲಾಗಿದೆ ಎಂದು ಹರೀಶ್ ವಿವರಿಸಿದರು.

ಪಿಎಂ ವಿಶ್ವಕರ್ಮ ಯೋಜನೆಗೆ ಸಂಬಂಧಿಸಿದಂತೆ ಬ್ಯಾಂಕುಗಳು ತಿರಸ್ಕರಿಸಿರುವ ಪಟ್ಟಿಯನ್ನು ನಮಗೆ ನೀಡಬೇಕು. ಅಲ್ಲದೇ ಯಾವ ಕಾರಣ ಕ್ಕಾಗಿ ತಿರಸ್ಕರಿಸಲಾಗಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು. ಕೋವಿಡ್ ಅವಧಿಯ ಸಾಲ ಮರುಪಾವತಿಗೂ ಇದಕ್ಕೂ ಸಂಬಂಧ ಕಲ್ಪಿಸಬಾರದು ಎಂದು ಸಂಸದ ಕೋಟ ತಿಳಿಸಿದರು.

ಜಿಪಂ ಸಿಇಓ ಪ್ರತೀಕ್ ಬಾಯಲ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸಿಪಿಓ ಡಾ.ಉದಯ ಶೆಟ್ಟಿ, ಬೆಂಗಳೂರು ಆರ್‌ಬಿಐನ ಮ್ಯಾನೇಜರ್ ವೆಂಕಟರಮಣಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News