ಯುವ ಗೀತೋತ್ಸವ, ಭಗವದ್ಗೀತೆ ಕಾರ್ಯಾಗಾರ ಸಮಾರೋಪ
ಉಡುಪಿ, ಡಿ.22: ಗೀತೆಯ ಮೂಲಕ ಮನುಷ್ಯನಲ್ಲಿ ಕರ್ತವ್ಯ ಪ್ರಜ್ಞೆ ಬೆಳೆಸುವುದು ಕೃಷ್ಣನ ಉದ್ದೇಶವಾಗಿದೆ. ಕರ್ಮರಹಿತನಾಗಿ ಮನುಷ್ಯ ಬದುಕಲು ಸಾಧ್ಯವಿಲ್ಲ. ಹೀಗಾಗಿ ತನಗೆ ವಿಹಿತವಾದ ಕರ್ಮ ಮಾಡಲೇಬೇಕು ಎಂದು ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಪರ್ಯಾಯ ಪುತ್ತಿಗೆ ಮಠ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಗೀತೋತ್ಸವದ ಅಂಗವಾಗಿ ರವಿವಾರ ಕೃಷ್ಣ ಮಠದ ರಾಜಾಂಗಣ ದಲ್ಲಿ ನಡೆದ ಯುವ ಗೀತೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಕುರಿತ ಒಂದು ದಿನದ ಕಾರ್ಯಾಗಾರದ ಸಮಾ ರೋಪ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಪ್ರತಿಯೊಬ್ಬ ಹಿಂದೂಗಳ ಮನೆಯಲ್ಲಿ ಭಗವದ್ಗೀತೆ ಪುಸ್ತಕವಿರಬೇಕು. ಸರಳವಾದ ಅರ್ಥವನ್ನು ಪ್ರತಿಯೊಬ್ಬರೂ ತಿಳಿದು ಕೊಳ್ಳಬೇಕು. ಈ ಮೂಲಕ ಗೀತೆಯನ್ನು ಆತ್ಮಸಾತ್ ಮಾಡಿಕೊಳ್ಳಬೇಕು. ಸಾಮಾಜಿಕ ಜಾಲತಾಣದಲ್ಲೇ ಸಮಯವನ್ನು ಕಳೆಯದೆ ಪಾರಮಾರ್ಥಿಕ ಚಿಂತನೆಯನ್ನೂ ಯುವ ಜನತೆ ಬೆಳೆಸಿಕೊಳ್ಳಬೇಕು ಎಂದರು.
ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ, ಪುತ್ತಿಗೆ ಕಿರಿಯ ಶ್ರೀಸುಶ್ರೀಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಯುವ ಲೇಖಕರಾದ ವಿದ್ವಾನ್ ಕೃಷ್ಣರಾಜ ಕುತ್ಪಾಡಿ, ರೋಹಿತ್ ಚಕ್ರತಿರ್ಥ, ಡಾ.ವಿಶ್ವನಾಥ ಸುಂಕಸಾಳ, ನಚಿಕೇತ್ ಹೆಗಡೆ, ಡಾ.ನವೀನ್ ಗಂಗೋತ್ರಿ, ಮುಂಬೈ ಉದ್ಯಮಿಗಳಾದ ದಿನೇಶ್ ಕುಲಾಲ್, ಸುಭಾಷ್ ಶೆರಿಯಾರ್, ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು. ವಿದ್ವಾನ್ ಮಹಿತೋಷ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ ಯುವ ಗೀತೋತ್ಸವವನ್ನು ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ನಂತರ ವಿದ್ವಾಂಸರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.