ಡಿ.14ರಂದು ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ ಅದಾಲತ್

Update: 2024-11-14 14:43 GMT

ಉಡುಪಿ, ನ.14:ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಬೈಂದೂರು ನ್ಯಾಯಾಲಯಗಳ ಆವರಣಗಳಲ್ಲಿ ರಾಷ್ಟ್ರೀಯ ಲೋಕ ಅದಾಲತನ್ನು ಡಿ.14ರಂದು ಹಮ್ಮಿ ಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕಿರಣ್ ಎಸ್.ಗಂಗಣ್ಣವರ್ ತಿಳಿಸಿದ್ದಾರೆ.

ಉಡುಪಿ ನ್ಯಾಯಾಲಯ ಸಂಕೀರ್ಣದಲ್ಲಿ ಗುರುವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿ ಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಅತೀ ಶೀಘ್ರವಾಗಿ ಪರಿಹಾರ ಪಡೆದುಕೊಳ್ಳಲು ಇದೊಂದು ಅವಕಾಶವಾಗಿದೆ ಎಂದು ಹೇಳಿದರು.

ರಾಜೀಯಾಗಬಲ್ಲ ಅಪರಾಧಿಕ ಪ್ರಕರಣಗಳು, ಎಂಎಂಡಿಆರ್ ಪ್ರಕರಣ, ಚೆಕ್ ಅಮಾನ್ಯ, ಬ್ಯಾಂಕ್ ಸಾಲದ ವಸೂಲಾತಿ, ಮೋಟಾರ್ ವಾಹನ ಅಪಘಾತ ಪರಿಹಾರ ನ್ಯಾಯಾಧೀಕರಣ, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು ಸೇರಿದಂತೆ ಕಾರ್ಮಿಕ ವಿವಾದಗಳು, ಕೈಗಾರಿಕ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ವೈವಾಹಿಕ/ಕುಟುಂಬ ನ್ಯಾಯಾಲಯಗಳ ಪ್ರಕರಣಗಳು, ಭೂ ಸ್ವಾಧೀನ ಪರಿಹಾರ ಪ್ರಕರಣಗಳು, ಭೂಸ್ವಾಧೀನ ಪರಿಹಾರ ಹಂಚಿಕೆ ಪ್ರಕರಣಗಳು, ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು ಹಾಗೂ ಪಿಂಚಣಿ ಪ್ರಕರಣಗಳು, ಸಿವಿಲ್ ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ.

ನ್ಯಾಯಾಲಯಗಳಲ್ಲಿ ಉಭಯ ಪಕ್ಷಗಾರರು ರಾಜೀ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ಮಾಡಿಕೊಳ್ಳಲಾಗುವುದು. ಇಬ್ಬರಿಗೂ ಒಪ್ಪಿಗೆಯಾಗುವಂತೆ ಪ್ರಕರಣವು ತೀರ್ಮಾನವಾಗುವುದರಿಂದ ಭಾಂದ್ಯವ ಉಳಿದು ವಿವಾದವು ತೀರ್ಮಾನ ವಾಗುತ್ತದೆ. ನ್ಯಾಯಾಲಯದಲ್ಲಿ ದಾಖಲಾಗದೇ ಇರುವ ಪ್ರಕರಣ ಗಳನ್ನೂ ಕೂಡ ರಾಜೀ ಸಂಧಾನದ ಮೂಲಕ ಪ್ರಕರಣ ಗಳನ್ನು ಇತ್ಯರ್ಥ ಪಡಿಸಿ ಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯ ಶುಲ್ಕವನ್ನು ಪೂರ್ಣ ವಾಗಿ ಮರುಪಾವತಿಸಲಾಗುವುದು. ಸಂಧಾನಕಾರರು ಸೂಚಿಸುವ ಪರಿಹಾರ ಒಪ್ಪಿದೆಯಾದಲ್ಲಿ ಮಾತ್ರ ರಾಜೀ ಮಾಡಿಕೊಳ್ಳ ಬಹುದು ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ನ್ಯಾಯಾಧೀಶ ಪಿ.ಆರ್.ಯೋಗೇಶ್ ಉಪಸ್ಥಿತರಿದ್ದರು.

3 ಅದಾಲತ್‌ಗಳಲ್ಲಿ 175640 ಪ್ರಕರಣಗಳು ಇತ್ಯರ್ಥ

ಉಡುಪಿ ಜಿಲ್ಲೆಯಲ್ಲಿ ಮಾ.16ರಂದು ನಡೆದ ಅದಾಲತ್‌ನಲ್ಲಿ ರಾಜೀಯಾಗ ಬಲ್ಲಂತಹ ಒಟ್ಟು 3509 ವ್ಯಾಜ್ಯಗಳನ್ನು ಗುರು ತಿಸಿ, 2381 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. 40680 ವಾಜ್ಯ ಪೂರ್ವ ಪ್ರಕರಣಗಳಲ್ಲಿ 40241 ಇತ್ಯರ್ಥ ಗೊಂಡಿವೆ. ಜು.13ರಂದು ನಡೆದ ಎರಡನೇ ಅದಲಾತ್‌ನಲ್ಲಿ 4953 ರಾಜೀಯಾಗಬಲ್ಲ ಪ್ರಕರಣಗಳಲ್ಲಿ 4012 ಮತ್ತು 85176 ವಾಜ್ಯ ಪೂರ್ವ ಪ್ರಕರಣಗಳಲ್ಲಿ 84913 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ.

ಸೆ.14ರಲ್ಲಿ ನಡೆದ ಮೂರನೇ ಅದಾಲತ್‌ನಲ್ಲಿ 3705 ರಾಜೀಯಾಗಬಲ್ಲ ಪ್ರಕರಣಗಳಲ್ಲಿ 3015 ಹಾಗೂ 43350 ವಾಜ್ಯ ಪೂರ್ವ ಪ್ರಕರಣಗಳಲ್ಲಿ 41078 ಪ್ರಕರಣಗಳು ಇತ್ಯರ್ಥವಾಗಿವೆ. ಇದೀಗ ಈ ವರ್ಷದ ಕೊನೆಯ ಅದಾಲತ್‌ಗೆ ಉಡುಪಿ ಜಿಲ್ಲೆಯಲ್ಲಿ ಬಾಕಿ ಇರುವ 34034 ಪ್ರಕರಣಗಳಲ್ಲಿ ಈವರೆಗೆ 3121 ರಾಜೀಯಾಗಬಲ್ಲಂತಹ ಪ್ರಕರಣಗಳನ್ನು ಗುರುತಿಸ ಲಾಗಿದೆ. ವಾಜ್ಯ ಪೂರ್ವ ಪ್ರಕರಣಗಳು ನಿಖರವಾಗಿ ಮಾಹಿತಿ ಇನ್ನೂ ಸಿಗಬೇಕಾಗಿದೆ ಎಂದು ಹಿರಿಯ ನ್ಯಾಯಾಧೀಶ ಪಿ.ಆರ್.ಯೋಗೇಶ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News