ನ.16ರಿಂದ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ‘ರಂಗಭಾಷೆ’ ಕಾರ್ಯಾಗಾರ
ಉಡುಪಿ, ನ.14: ಯುವ ಪೀಳಿಗೆಗೆ ರಂಗಭೂಮಿಯ ಕುರಿತಂತೆ ಆಸಕ್ತಿ ಬೆಳೆಸುವ ಉದ್ದೇಶದಿಂದ ಉಡುಪಿಯ ರಂಗ ಭೂಮಿ ಸಂಸ್ಥೆ ನ.16ರಿಂದ ಉಡುಪಿ ಪರಿಸರದ 12 ಕಾಲೇಜುಗಳ 100ಕ್ಕೂ ಅಧಿಕ ಆಯ್ದ ವಿದ್ಯಾರ್ಥಿಗಳಿ ಗಾಗಿ ‘ರಂಗಭಾಷೆ’ ರಂಗ ಕಾರ್ಯಾಗಾರ ಹಾಗೂ ಕಿರುನಾಟಕಗಳ ಉತ್ಸವ ವನ್ನು ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಹಮ್ಮಿಕೊಂಡಿದೆ ಎಂದು ಉಡುಪಿ ರಂಗಭೂಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಕಳದ ಯಕ್ಷ ರಂಗಾಯಣ ಹಾಗೂ ಮಿಲಾಗ್ರಿಸ್ ಕಾಲೇಜುಗಳ ಸಹಯೋಗದೊಂದಿಗೆ ಮೂರು ದಿನಗಳ ಈ ‘ರಂಗಭಾಷೆ’ ಕಾರ್ಯಾಗಾರ ದಲ್ಲಿ ನಾಟಕವೆಂದರೆ ಏನು, ಯಾಕೆ ಮತ್ತು ಹೇಗೆ ಎಂಬ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿಗಳನ್ನು ನಾಡಿನ ಖ್ಯಾತನಾಮ ರಂಗಕರ್ಮಿ ಗಳು ತಿಳಿಸಿಕೊಡಲಿದ್ದಾರೆ ಎಂದರು.
60ರ ಸಂಭ್ರಮದಲ್ಲಿರುವ ರಂಗಭೂಮಿ ಸಂಸ್ಥೆ ಈ ಹಿನ್ನೆಲೆಯಲ್ಲಿ ಹಲವು ಉಪಯುಕ್ತ, ಅರ್ಥಪೂರ್ಣ ಯೋಜನೆಗಳನ್ನು ಹಮ್ಮಿಕೊಂಡಿದೆ. ಇದರ ಮೊದಲ ಹೆಜ್ಜೆಯಾಗಿ ಈಗಾಗಲೇ ಉಡುಪಿ ಆಸುಪಾಸಿನ ಆಯ್ದ 12 ಪ್ರೌಢ ಶಾಲೆಗಳಲ್ಲಿ ‘ರಂಗಭೂಮಿ ರಂಗಶಿಕ್ಷಣ’ ಎಂಬ ರಂಗತರಬೇತಿ ಹಾಗೂ ನಾಟಕ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ 10 ಮಂದಿ ಹಿರಿ-ಕಿರಿಯ ರಂಗನಿರ್ದೇಶಕರನ್ನು ನಿಯೋಜಿಸಿದ್ದು ಅವರು 12 ಶಾಲೆಗಳ 300ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ರಂಗತರಬೇತಿ ನೀಡುತಿದ್ದಾರೆ ಎಂದರು.
ನ.16ರಿಂದ 18ರವರೆಗೆ ನಡೆಯುವ ಕಾಲೇಜು ವಿದ್ಯಾರ್ಥಿಗಳ ರಂಗಭಾಷೆ ಕಾರ್ಯಾಗಾರವನ್ನು ಶನಿವಾರ ಬೆಳಗ್ಗೆ 11ಕ್ಕೆ ರಂಗಭೂಮಿ ಗೌರವಾಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್‌ರ ಅಧ್ಯಕ್ಷತೆಯಲ್ಲಿ ಪ್ರಸಿದ್ಧ ರಂಗ ನಿರ್ದೇಶಕ ಪ್ರಸನ್ನ ಉದ್ಘಾಟಿಸಲಿ ದ್ದಾರೆ ಎಂದು ರಂಗಭೂಮಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ತಿಳಿಸಿದರು.
ಮೈಸೂರಿನ ರಂಗನಟ, ನಿರ್ದೇಶಕ ಮಂಡ್ಯ ರಮೇಶ್, ಮಿಲಾಗ್ರಿಸ್ ಸಂಸ್ಥೆಗಳ ಸಂಚಾಲಕರಾದ ಅ.ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ರಂಗತಜ್ಞ ಹಾಗೂ ಕರ್ನಾಟಕ ರಂಗ ಸಮಾಜದ ಸದಸ್ಯ ಶಶಿಧರ ಭಾರಿಘಾಟ್, ರಂಗ ನಿರ್ದೇಶಕಿ ಶ್ವೇತಾರಾಣಿ ಮುಖ್ಯಅತಿಥಿಗಳಾಗಿ ಭಾಗವಹಿಸುವರು.ಕಾಲೇಜಿನ ಪ್ರಾಂಶುಪಾಲರಾದ ಡಾ.ವಿನ್ಸೆಂಟ್ ಆಳ್ವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ, ಎಚ್.ಜಯಪ್ರಕಾಶ್ ಕೆದ್ಲಾಯ ಉಪಸ್ಥಿತರಿರುವರು.
ಮೂರು ದಿನ ನಡೆಯುವ ಶಿಬಿರದ ನೇತೃತ್ವವನ್ನು ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳ್ ವಹಿಸಲಿದ್ದು, ಹೆಸರಾಂತ ರಂಗಕರ್ಮಿಗಳಾದ ಪ್ರಸನ್ನ, ನಾಗಾಭರಣ, ಮಂಡ್ಯ ರಮೇಶ್, ಸಿಹಿಕಹಿ ಚಂದ್ರು, ಕೆ.ಜಿ. ಕೃಷ್ಣಮೂರ್ತಿ, ಶ್ರೀಪಾದ ಭಟ್, ಮಂಜು ಕೊಡಗು, ವಿನೀತ್ ಕುಮಾರ್, ಶ್ವೇತಾ ಎಚ್.ಕೆ.ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು ಎಂದರು.
ಕಾರ್ಯಾಗಾರದಲ್ಲಿ ಅಭಿನಯ ದರ್ಪಣ ಚಿಕಞ್ಕಮಗಳೂರು ತಂಡದಿಂದ ‘ಮುಸ್ಸಂಜೆಯಲ್ಲಿ ನಡೆದ ಘಟನೆ’, ಕಿನ್ನರ ಮೇಳ ತುಮರಿ ತಂಡದಿಂದ ‘ಇರುವೆ ಪುರಾಣ’, ಭಳಿರೇ ವಿಚಿತ್ರಂ ತಂಡದಿಂದ ‘ದಶಾನನ ಸ್ವಪ್ನ ಸಿದ್ಧಿ’ ಹಾಗೂ ಒಡನಾಟ ತಂಡದಿಂದ ‘ಆನೆ ಡಾಕ್ಟರ್’ ನಾಟಕಗಳು ಪ್ರದರ್ಶನಗೊಳ್ಳಲಿದೆ.
ನ.18ರ ಸಂಜೆ 3:30ಕ್ಕೆ ಸಮಾರೋಪ ಸಮಾರಂಭ ಡಾ.ತಲ್ಲೂರು ಶಿವರಾಮ ಶೆಟ್ಟರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ರಂಗಕರ್ಮಿ ಕೆ.ಜಿ. ಕೃಷ್ಣಮೂರ್ತಿ ಸಮಾರೋಪ ಭಾಷಣ ಮಾಡುವರು.ರಂಗಕರ್ಮಿ ಎನ್.ವಿ. ಶ್ರೀಕಾಂತ್ ಮುಖ್ಯ ಅತಿಥಿಯಾಗಿರುವರು.
ಪತ್ರಿಕಾಗೋಷ್ಠಿಯಲ್ಲಿ ರಂಗಭಾಷೆ ಸಂಚಾಲಕ ರವಿರಾಜ್ ನಾಯಕ್, ಉಪಾಧ್ಯಕ್ಷ ಭಾಸ್ಕರರಾವ್ ಕಿದಿಯೂರು, ರೇವತಿ ನಾಡಿಗೇರ್ ಉಪಸ್ಥಿತರಿದ್ದರು.