ಮೂವರು ಸಾಧಕರಿಗೆ ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ ಪ್ರದಾನ
ಉಡುಪಿ, ನ.14: ಉಡುಪಿ ವಿಶ್ವ ಸಂಸ್ಕೃತಿ ಪ್ರತಿಷ್ಠಾನ ಹಾಗೂ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆಯ ವತಿಯಿಂದ ಇತಿಹಾಸ ಸಂಶೋಧಕ ಅಂಬ್ರಯ್ಯ ಮಠ, ವಿಮರ್ಶಕ ಡಾ.ಎಚ್.ಎಸ್.ಸತ್ಯನಾರಾಯಣ ಹಾಗೂ ವೈದ್ಯ ಡಾ.ಉಮೇಶ್ ಪುತ್ರ ಅವರಿಗೆ ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು.
ಗುರುವಾರ ಉಡುಪಿ ಕಿದಿಯೂರು ಹೊಟೇಲ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜಾನಪದ ವಿದ್ವಾಂಸ ಡಾ.ಗಣನಾಥ ಎಕ್ಕಾರು ಪ್ರಶಸ್ತಿ ಪ್ರದಾನ ಮಾಡಿದರು. ಅಧ್ಯಕ್ಷತೆಯನ್ನು ಹಿರಿಯ ವಿದ್ವಾಂಸ ನಾಡೋಜ ಡಾ.ಕೆ.ಪಿ.ರಾವ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಂಬ್ರಯ್ಯ ಮಠ, ಇಂದು ಸಂಶೋಧನೆ ಗಳು ಕೇವಲ ಕಾಗದಗಳಿಗೆ ಸೀಮಿತವಾಗಿದೆ. ಸಂಶೋಧಕ ಹಾಗೂ ಸಾಹಿತಿಗಳ ದೃಷ್ಠಿಕೋನಗಳಲ್ಲಿ ಸಾಕಷ್ಟು ವ್ಯಾತ್ಯಾಸಗಳಿರುತ್ತದೆ. ಆದುದರಿಂದ ಸಂಶೋಧಕ ಸಾಹಿತಿಯಾಗಿದ್ದರೆ, ಸಾಹಿತಿಗೆ ಇತಿಹಾಸದ ಜ್ಞಾನ ಇದ್ದರೆ ಉತ್ತಮ ಎಂದು ಅಭಿಪ್ರಾಯ ಪಟ್ಟರು.
ವೇದಿಕೆಯಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ.ಶಂಕರ್, ಮಲಬಾರ್ ಗೋಲ್ಡ್‌ನ ಉಡುಪಿ ಮುಖ್ಯಸ್ಥ ಹಫೀಜ್ ರೆಹಮಾನ್ ಉಪಸ್ಥಿತರಿದ್ದರು. ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಪ್ರಾಸ್ತಾವಿಕ ವಾಗಿ ಮಾತನಾಡಿದರು. ಮಧುಸೂದನ್ ಹೇರೂರು ಸ್ವಾಗತಿಸಿದರು. ಪುರಸ್ಕಾರ ಸಮಿತಿಯ ಸಂಚಾಲಕಿ ಸಂಧ್ಯಾ ಶೆಣೈ ವಂದಿಸಿದರು. ರಾಜೇಶ್ ಭಟ್ ಪಣಿಯಾಡಿ ಕಾರ್ಯಕ್ರಮ ನಿರೂಪಿಸಿದರು.