ಜ.17ರಿಂದ ಕರ್ನಾಟಕ ಕ್ರೀಡಾಕೂಟ-2025: ಹೇರೂರು ಬಳಿ ಮಡಿಸಾಲು ಹೊಳೆಯಲ್ಲಿ ಕಯಾಕಿಂಗ್ ಸ್ಪರ್ಧೆ
ಉಡುಪಿ, ಜ.16: ಬೆಂಗಳೂರು, ಹುಬ್ಬಳ್ಳಿ-ಧಾರವಾಡ ಬಳಿಕ ಇದೀಗ ಕರಾವಳಿಗೆ ಬಂದಿರುವ ಮೂರನೇ ಕರ್ನಾಟಕ ಕ್ರೀಡಾಕೂಟ-2025ಕ್ಕೆ ಶುಕ್ರವಾರ ಬೆಳಗ್ಗೆ ಕಯಾಕಿಂಗ್ ಸ್ಪರ್ಧೆಯೊಂದಿಗೆ ಚಾಲನೆ ದೊರೆಯಲಿದ್ದು, ಬ್ರಹ್ಮಾವರ ತಾಲೂಕಿನ ಹೇರೂರು ಬಳಿಯ ಮಡಿಸಾಲು ಹೊಳೆಯಲ್ಲಿ ಈ ಸ್ಪರ್ಧೆ ನಡೆಯಲಿದೆ.
ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಹೇರೂರು ಸೇತುವೆಯ ಪಕ್ಕದಲ್ಲೇ ಸ್ಪರ್ಧಾ ತಾಣವಿದ್ದು, ನಾಳೆ ಬೆಳಗ್ಗೆ 8ರಿಂದ ಅಪರಾಹ್ನ 12ಗಂಟೆಯವರೆಗೆ ಕಯಾಕಿಂಗ್ ಹಾಗೂ ಕೆನೋಯ್‌ನ ಸ್ಪ್ರಿಂಟ್ ಸ್ಪರ್ಧೆಗಳು ನಡೆಯಲಿವೆ. ಪುರುಷರ ಹಾಗೂ ಮಹಿಳೆ ಯರ ವಿಭಾಗಗಳಲ್ಲಿ 200ಮೀ. ಹಾಗೂ 500ಮೀ. ಸ್ಪರ್ಧೆಗಳಲ್ಲಿ ಹೀಟ್ಸ್, ಸೆಮಿಫೈನಲ್ ಹಾಗೂ ಫೈನಲ್ ಸ್ಪರ್ಧೆಗಳು ನಡೆಯಬೇಕಾಗಿದೆ ಎಂದು ರಾಜ್ಯ ಕಯಾಕಿಂಗ್ ಹಾಗೂ ಕನೂಯಿಂಗ್ ಸಂಸ್ಥೆಯ ಅಧಿಕಾರಿ ತಿಳಿಸಿದ್ದಾರೆ.
ಸ್ಪರ್ಧೆಗಳು ಸಿಂಗಲ್, ಡಬಲ್ ಹಾಗೂ ಮಿಕ್ಸೆಡ್ ಡಬಲ್ ವಿಭಾಗಗಳಲ್ಲಿ ನಡೆಯಲಿವೆ. ಪ್ರತಿ ವಿಭಾಗದಲ್ಲೂ ರಾಜ್ಯದ ಅಗ್ರಗಣ್ಯ ತಲಾ ಎಂಟು ಮಂದಿ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಗಳೂರು, ಉಡುಪಿ, ಚಿಕ್ಕಮಗಳೂರು, ದಾವಣಗೆರೆ ಹಾಗೂ ಕಾರವಾರದಿಂದ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ವಿವರಿಸಿದರು.
ವಿವಿಧ ಸ್ಪರ್ಧೆಗಳ ಮೂಲಕ ರಾಷ್ಟ್ರೀಯ ಕ್ರೀಡಾಕೂಟಕ್ಕೆ ರಾಜ್ಯದಿಂದ ಆಯ್ಕೆಯಾಗಿರುವ ಬೆಂಗಳೂರಿನ ಸಮರ್ ಎ.ಚಾಕೋ ಅವರು ನಾಳೆ ಇಲ್ಲಿ ಸ್ಪರ್ಧಿಸುವ ಸ್ಪರ್ಧಾಳುಗಳಲ್ಲಿ ಪ್ರಮುಖರು. ಅಲ್ಲದೇ ರಾಜ್ಯ ಮಟ್ಟದಲ್ಲಿ ಮಿಂಚಿರುವ ದಾದಾಪೀರ್, ನಾಗೇಶ್ ನಾಯಕ್, ಧನಲಕ್ಷ್ಮೀ, ಐಶ್ವರ್ಯ ಹಾಗೂ ಪ್ರಾಂಜಲ ಶೆಟ್ಟಿ ಅವರ ಸಹ ಇದರಲ್ಲಿ ಪಾಲ್ಗೊಳ್ಳು ತಿದ್ದಾರೆ ಎಂದು ಅವರು ತಿಳಿಸಿದರು.
ನಾಳಿನ ಸ್ಪರ್ಧೆ ಅಪರಾಹ್ನ 12ಗಂಟೆಯವರೆಗೆ ಮಾತ್ರ ನಡೆಯಲಿದೆ. ಇದರಲ್ಲಿ ಕಯಾಕಿಂಗ್ ಹಾಗೂ ಕನೊಯಿಂಗ್‌ನ 500ಮೀ. ಸ್ಪರ್ಧೆಗಳು ಮಾತ್ರ ಆಯೋಜನೆಗೊಳ್ಳಲಿವೆ. ಆ ಬಳಿಕ ಎಲ್ಲಾ ಸ್ಪರ್ಧಾಳುಗಳು ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆಯುವ ಮಂಗಳೂರಿಗೆ ತೆರಳಲಿದ್ದು, ಅದರಲ್ಲಿ ಭಾಗವಹಿಸಲಿದ್ದಾರೆ.
ಜ.18ರಂದು ಬೆಳಗ್ಗೆ 8ಗಂಟೆಗೆ ಸ್ಪರ್ಧೆಗಳು ಪುನರಾರಂಭಗೊಳ್ಳಲಿದ್ದು, ಕಯಾಕಿಂಗ್, ಕನೂಯಿಂಗ್ 200ಮೀ. ಸ್ಪ್ರಿಂಟ್ ಅಲ್ಲದೇ 500ಮೀ. ಹಾಗ 200ಮೀ. ದೂರದ ಮಿಕ್ಸೆಡ್ ಡ್ರ್ಯಾಗನ್ ಬೋಟ್ ರೇಸ್ ಸ್ಪರ್ಧೆಗಳು ನಡೆಯಲಿವೆ. 19ರಂದು ಮಹಿಳೆಯರು ಹಾಗೂ ಪುರುಷರ ಕೆನೊಯ್ ಸ್ಲಲೋಮ್ ಸ್ಪರ್ಧೆಗಳು ನಡೆಯಲಿವೆ.