ಉಡುಪಿ| ರಾಜ್ಯದ ಅಗ್ರ 8 ತಂಡಗಳು, ತಲಾ 8 ಕ್ರೀಡಾಳುಗಳು ಸ್ಪರ್ಧಿಸುವ ಕ್ರೀಡಾಕೂಟ

Update: 2025-01-16 16:24 GMT

ಉಡುಪಿ, ಜ.16: ರಾಜ್ಯದ ಆಯಾ ಕ್ರೀಡಾ ಸಂಸ್ಥೆಗಳು ಆಯ್ಕೆ ಮಾಡುವ ಅಗ್ರ ಎಂಟು ತಂಡಗಳು ಹಾಗೂ ವೈಯಕ್ತಿಕ ಸ್ಪರ್ಧೆಗಳಲ್ಲಿ ಎಂಟು ಮಂದಿ ಸ್ಪರ್ಧಿಸುವ ವಿಶ್ವ ಒಲಿಂಪಿಕ್ಸ್ ಮಾದರಿಯಲ್ಲಿ ನಡೆಯುವ ಮೂರನೇ ಕರ್ನಾಟಕ ಕ್ರೀಡಾಕೂಟ ನಾಳೆಯಿಂದ ಉಡುಪಿ ಮತ್ತು ಮಂಗಳೂರಿನಲ್ಲಿ ಪ್ರಾರಂಭಗೊಳ್ಳಲಿವೆ.

ಕರ್ನಾಟಕ ಒಲಿಂಪಿಕ್ ಸಂಸ್ಥೆ ರಾಜ್ಯದ ವಿವಿಧ ಕ್ರೀಡಾ ಸಂಸ್ಥೆಗಳ ಸಹಯೋಗದೊಂದಿಗೆ ಏಳು ದಿನಗಳ ಈ ಕ್ರೀಡಾಕೂಟ ವನ್ನು ಆಯೋಜಿಸಿದೆ. ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತಗಳ ಆಶ್ರಯದಲ್ಲಿ ಇದು ನಡೆಯಲಿದೆ. ಹಿಂದಿನ ಎರಡು ಕ್ರೀಡಾಕೂಟಗಳು ಬೆಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ನಡೆದಿದ್ದವು.

ಕ್ರೀಡಾಕೂಟದಲ್ಲಿ ಈ ಬಾರಿ ಒಟ್ಟು 25 ಸ್ಪರ್ಧೆಗಳಿದ್ದು, ಇವುಗಳಲ್ಲಿ ಮಂಗಳೂರಿನಲ್ಲಿ 12 ಹಾಗೂ ಉಡುಪಿಯಲ್ಲಿ 11 ಸ್ಪರ್ಧೆಗಳು ನಡೆಯಲಿದ್ದು, ಜಿಮ್ನಾಸ್ಟಿಕ್ ಹಾಗೂ ರೈಫಲ್ ಶೂಟಿಂಗ್ ಸ್ಪರ್ಧೆಗಳು ಈಗಾಗಲೇ ಬೆಂಗಳೂರಿನಲ್ಲಿ ನಡೆದಿವೆ. ಉಡುಪಿಯಲ್ಲಿ ನಡೆಯುವ ವಿವಿಧ ಸ್ಪರ್ಧೆಗಳಲ್ಲಿ 1350ಕ್ಕೂ ಅಧಿಕ ಕ್ರೀಡಾಪಟುಗಳು ಹಾಗೂ 260ರಷ್ಟು ತಾಂತ್ರಿಕ ಸಿಬ್ಬಂದಿಗಳು ಭಾಗವಹಿಸುತಿದ್ದಾರೆ.

ಶನಿವಾರದಿಂದ 3300ರಷ್ಟು ಕ್ರೀಡಾಪಟು 631 ಚಿನ್ನದ ಪದಕ, 631 ಬೆಳ್ಳಿ ಪದಕ ಹಾಗೂ 827 ಕಂಚಿನ ಪದಕಗಳಿಗಾಗಿ ಸೆಣಸಾಡಲಿದ್ದಾರೆ. ಕ್ರೀಡಾಕೂಟದ ಪ್ರಧಾನ ಆಕರ್ಷಣೆಗಳಾದ ಅತ್ಲೆಟಿಕ್ ಹಾಗೂ ಸೈಕ್ಲಿಂಗ್ ಸ್ಪರ್ಧೆಗಳು ಕ್ರಮವಾಗಿ ಉಡುಪಿಯ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ ಹಾಗೂ ಉಡುಪಿ ನಗರ ಹೊರವಲಯದ ಉಪ್ಪೂರಿನಲ್ಲಿ ನಡೆಯಲಿವೆ.

ಕಬಡ್ಡಿ ಸ್ಪರ್ಧೆ: ಕರಾವಳಿ ಭಾಗದಲ್ಲಿ ಜನಪ್ರಿಯತೆ ಪಡೆದಿರುವ ಕಬಡ್ಡಿ ಸ್ಪರ್ಧೆಗಳು ಜ.19ರಿಂದ 23ರವರೆಗೆ ಜಿಲ್ಲಾ ಕ್ರೀಡಾಂಗಣದ ಕೋರ್ಟ್‌ಗಳಲ್ಲಿ ನಡೆಯಲಿವೆ. ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ರಾಜ್ಯ ಕಬಡ್ಡಿ ಅಸೋಸಿಯೇಷನ್ ಆಯ್ಕೆ ಮಾಡಿರುವ ಅತ್ಯುತ್ತಮ ಪ್ರದರ್ಶನ ನೀಡಿರುವ ತಲಾ ಎಂಟು ತಂಡಗಳು ಭಾಗವಹಿಸಲಿವೆ.

ಉಡುಪಿಯ ಪುರುಷರ ತಂಡ, ಮಂಡ್ಯ, ಹಾಸನ ಹಾಗೂ ಬೆಂಗಳೂರು ಗ್ರಾಮಾಂತರ ತಂಡಗಳೊಂದಿಗೆ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದರೆ, ಎ ಗುಂಪಿನಲ್ಲಿ ದಕ್ಷಿಣ ಕನ್ನಡ ತಂಡವಲ್ಲದೇ, ಬೆಂಗಳೂರು ನಗರ, ಧಾರವಾಡ ಹಾಗೂ ಬಾಗಲಕೋಟೆ ತಂಡಗಳು ಸೆಣಸಲಿವೆ.

ಮಹಿಳೆಯರ ವಿಭಾಗದಲ್ಲಿ ಉಡುಪಿ ತಂಡವು ಬೆಂಗಳೂರು ನಗರ, ಬೆಳಗಾವಿ ಹಾಗೂ ಮೈಸೂರು ಜಿಲ್ಲಾ ತಂಡ ಗಳೊಂದಿಗೆ ಬಿ ಗುಂಪಿನಲ್ಲಿದ್ದರೆ ಎ ಗುಂಪಿನಲ್ಲಿ ದಕ್ಷಿಣ ಕನ್ನಡ ತಂಡವಲ್ಲದೇ ಚಿಕ್ಕಮಗಳೂರು, ವಿಜಯಪುರ ಹಾಗೂ ಹಾವೇರಿ ತಂಡಗಳು ಸ್ಥಾನ ಪಡೆದಿವೆ.

ಸೈಕ್ಲಿಂಗ್: ಸೈಕ್ಲಿಂಗ್ ಸ್ಪರ್ಧೆ ಜ.19ರಂದು ಉಪ್ಪೂರಿನಲ್ಲಿ ನಡೆಯಲಿವೆ. ಪುರುಷರ ವಿಭಾಗದಲ್ಲಿ 42 ಹಾಗೂ ಮಹಿಳೆಯರ ವಿಭಾಗದಲ್ಲಿ 21 ಮಂದಿ ಸೈಕ್ಲಿಸ್ಟ್‌ಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಸ್ಪರ್ಧೆ ಬೆಳಗ್ಗೆ 6:30ಕ್ಕೆ ಪ್ರಾರಂಭ ಗೊಂಡು ಅಪರಾಹ್ನ1 ಗಂಟೆ ಸುಮಾರಿಗೆ ಮುಕ್ತಾಯಗೊಳ್ಳಲಿದೆ.

ಉಪೂರಿನ ಸರಕಾರಿ ಪ್ರೌಢ ಶಾಲೆಯಿಂದ ಸ್ಪರ್ಧೆ ಪ್ರಾರಂಭಗೊಳ್ಳಲಿದ್ದು, ಅಲ್ಲಿಯೇ ಮುಕ್ತಾಯಗೊಳ್ಳಲಿದೆ. ಸ್ಪರ್ಧಿಗಳು ಉಪ್ಪೂರು-ಹಾವಂಜೆ- ಶಾಂತಿನಗರಕ್ಕೆ ತೆರಳಿ ಮರಳಬೇಕಿದೆ. ಪುರುಷರಿಗೆ 40ಕಿ.ಮೀ. ರೋಡ್ ಟೀಮ್ ಟ್ರೈಲ್ ನಡೆದರೆ, ಮಹಿಳೆಯರಿಗೆ 20ಕಿ.ಮೀ. ರೋಡ್ ಟೀಮ್ ಟ್ರೈಲ್ ನಡೆಯಲಿದೆ. ಅಲ್ಲದೇ ಪುರುಷರಿಗೆ 50ಕಿ.ಮೀ. ಹಾಗೂ ಮಹಿಳೆಯರಿಗೆ 30ಕಿ.ಮೀ. ವೇಗದ ಸ್ಪರ್ಧೆ ಇದೆ.

ಸ್ಪರ್ಧೆಯ ಸಂದರ್ಭದಲ್ಲಿ ಕೆ.ಜಿ.ರೋಡ್‌ನಿಂದ ಪೆರ್ಡೂರಿಗೆ ತೆರಳುವ ಮಾರ್ಗದಲ್ಲಿ ಸಂಚರಿಸುವ ಬಸ್ಸುಗಳು ಸೇರಿದಂತೆ ವಿವಿಧ ವಾಹನಗಳಿಗೆ ಬದಲಿ ವ್ಯವಸ್ಥೆಯನ್ನು ಪೊಲೀಸರು ಮಾಡಲಿದ್ದಾರೆ ಎಂದು ಜಿಲ್ಲಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಷನ್‌ಕುಮಾರ್ ತಿಳಿಸಿದ್ದಾರೆ.

18ರಂದು ಸೈಕ್ಲಥಾನ್: ಸೈಕ್ಲಿಂಗ್ ಸ್ಪರ್ಧೆಗೆ ಪೂರ್ವಭಾವಿಯಾಗಿ ಜ.18ರ ಶನಿವಾರ ಸಂಜೆ 4ಗಂಟೆಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಸೈಕಲಿಸ್ಟ್‌ಗಳಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಿಂದ ಮಣಿಪಾಲ-ಉಡುಪಿ ಮಾರ್ಗವಾಗಿ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದವರೆಗೆ ಸೈಕ್ಲಥಾನ್ ನಡೆಯಲಿದೆ ಎಂದು ಡಾ.ರೋಷನ್ ಕುಮಾರ್ ಹೇಳಿದರು.

ಅತ್ಲೆಟಿಕ್ ಸ್ಪರ್ಧೆಯಲ್ಲಿ ಪ್ರತಿ ಸ್ಪರ್ಧೆಯಲ್ಲಿ ರಾಜ್ಯದ ಅಗ್ರ ಕ್ರೀಡಾಪಟುಗಳೆಂದು ಅತ್ಲೆಟಿಕ್ ಅಸೋಸಿಯೇಷನ್ ಗುರುತಿಸಿದ ತಲಾ ಎಂಟು ಮಂದಿ ಇಲ್ಲಿ ಸ್ಪರ್ಧಿಸಲಿದ್ದಾರೆ. ಟ್ಟಾರೆಯಾಗಿ 170 ಮಂದಿ ಪುರುಷ ಹಾಗೂ 100 ಮಂದಿ ಮಹಿಳಾ ಅತ್ಲೀಟ್‌ ಗಳು ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಸ್ಪರ್ಧೆಯ ವೇಳೆ ಉಡುಪಿ ಆಸುಪಾಸಿನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವ ನಿಟ್ಟಿನಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೂ ಎಲ್ಲಾ ಸ್ಪರ್ಧೆಗಳಿಗೂ ಉಚಿತ ಪ್ರವೇಶವಿರು ತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಕ್ರೀಡಾಸಕ್ತರು ಸ್ಪರ್ಧೆಯ ವೇಳೆ ಉಪಸ್ಥಿತರಿದ್ದು, ಕ್ರೀಡಾಪಟುಗಳಿಗೆ ಉತ್ತೇಜನ ನೀಡುವಂತೆ ಅವರು ಮನವಿ ಮಾಡಿದ್ದಾರೆ.

ಕ್ರೀಡಾಕೂಟದ ಸಮಾರೋಪ ಸಮಾರಂಭ ಹಾಗೂ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಜ.23ರಂದು ಸಂಜೆ 5ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಬಳಿಕ 6ಗಂಟೆಯಿಂದ ಮೂಡುಬಿದರೆ ಆಳ್ವಾಸ್‌ನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಡಾ.ರೋಶನ್‌ ಕುಮಾರ್ ಶೆಟ್ಟಿ ತಿಳಿಸಿದರು.






Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News