ಉಡುಪಿ ನಗರಸಭೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾಪ

Update: 2025-01-16 15:51 GMT

ಉಡುಪಿ, ಜ.16: ಬೆಳೆಯುತ್ತಿರುವ ಉಡುಪಿ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ಸಂಬಂಧ ಪರಿಶೀಲನೆ ನಡೆಸಿ ಸೂಕ್ತ ಶಿಫಾರಸ್ಸಿನೊಂದಿಗೆ ಪ್ರಸ್ತಾವನೆ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಉಡುಪಿ ಜಿಲ್ಲಾಧಿಕಾರಿ ಹಾಗೂ ಪೌರಾಯುಕ್ತರಿಗೆ ಸೂಚನೆ ನೀಡಿದ್ದು, ಅದರಂತೆ ಜಿಲ್ಲಾಡಳಿತ ಅಗತ್ಯವಿರುವ ಮಾನದಂಡ ಗಳೊಂದಿಗೆ ವಿಸೃತ್ತ ವರದಿಯನ್ನು ಸರಕಾರಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಕಾರ್ಯದರ್ಶಿ ಮೋಹನ್ ದಾಸ್ ಹೆಗ್ಡೆ, ಉಡುಪಿ ನಗರಸಭೆಯು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ಅಗತ್ಯವಿರುವ ಮಾನದಂಡಗಳನ್ನು ಹೊಂದಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಉಡುಪಿ ಮಹಾನಗರ ಪಾಲಿಕೆಯಾಗಿ ಮೇಲ್ದಜೇಕರಿಸಲು ಕ್ರಮ ಕೈಗೊಳ್ಳಬೇಕೆಂದು ಪೌರಾಡಳಿತ ಸಚಿವ ರಹೀಂ ಖಾನ್ ಅವರಿಗೆ ಮನವಿ ಸಲ್ಲಿಸಿದ್ದರು.

ಅಗತ್ಯ ಜನಸಂಖ್ಯೆಯನ್ನು ಹೊಂದಿರುವ ಮತ್ತು ಪಟ್ಟಣವು ಸಾಕಷ್ಟು ವಿಸ್ತರಣೆಗೊಂಡಿರುವುದರಿಂದ ಸಚಿವರು ಈ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

ಪ್ರಸ್ತುತ ಉಡುಪಿ ನಗರಸಭೆ 2.25 ಲಕ್ಷ ಜನಸಂಖ್ಯೆ ಹೊಂದಿದ್ದು, ಸುತ್ತಮುತ್ತಲಿನ ಹಿರಿಯಡ್ಕ, ಆತ್ರಾಡಿ, ಸಂತೆಕಟ್ಟೆ, ಕಲ್ಯಾಣಪುರ, ಅಂಬಲ ಪಾಡಿ, ತೆಂಕನಿಡಿಯೂರು, ಕಡೆಕಾರ್, ಉದ್ಯಾವರ, ಕಟಪಾಡಿ ಗ್ರಾಪಂಗಳನ್ನು ಸೇರಿಕೊಂಡರೆ ಒಟ್ಟು ಜನಸಂಖ್ಯೆ 3.85 ಲಕ್ಷ ದಾಟುತ್ತದೆ. ಹೀಗಾಗಿ ಉಡುಪಿ ನಗರಸಭೆಯು ಮಹಾನಗರಪಾಲಿಕೆಯನ್ನಾಗಿ ಮೇಲ್ದರ್ಜೆ ಗೇರಿಸಲು ಅರ್ಹ ವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಉಡುಪಿ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ನಿಯಮಾನುಸಾರ ಅಗತ್ಯ ಕ್ರಮ ಕೈಗೊಂಡು, ವಾಸ್ತವಾಂಶಗಳ ಸಹಿತ ವರದಿ ನೀಡುವಂತೆ ಸರಕಾರದಿಂದ ಸೂಚನೆ ಬಂದಿದೆ. ನಗರಸಭೆಗೆ ಹೊಂದಿ ಕೊಂಡಿರುವ ಸುತ್ತಮುತ್ತಲಿನ ಗ್ರಾಪಂಗಳನ್ನು ಸೇರಿಕೊಂಡರೆ ಜನಸಂಖ್ಯೆ 3 ಲಕ್ಷ ದಾಟಲಿದೆ. ವಾರ್ಡ್‌ಗಳನ್ನು ರೂಪಿಸುವ ನಿಟ್ಟಿನಲ್ಲಿ ಸಮಗ್ರ ಹಾಗೂ ಸೂಕ್ತ ಶಿಫಾರಸ್ಸಿನೊಂದಿಗೆ ಶೀಘ್ರದಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News