ಮಂಗಳೂರು ಸೆಂಟ್ರಲ್- ಮಡಗಾಂವ್ ಜಂಕ್ಷನ್ ನಡುವಿನ ರೈಲಿಗೆ 2 ಹೆಚ್ಚುವರಿ ಶಾಶ್ವತ ಕೋಚ್

Update: 2023-11-07 14:27 GMT

ಸಾಂದರ್ಭಿಕ ಚಿತ್ರ

ಉಡುಪಿ, ನ.7: ಮಂಗಳೂರು ಸೆಂಟ್ರಲ್ ಹಾಗೂ ಮಡಗಾಂವ್ ಜಂಕ್ಷನ್ ನಡುವೆ ಪ್ರತಿದಿನ ಸಂಚರಿಸುವ ಪ್ಯಾಸೆಂಜರ್ ರೈಲಿಗೆ ಎರಡು ಹೆಚ್ಚುವರಿ ಜನರಲ್ ಕೋಚ್‌ಗಳನ್ನು ಶಾಶ್ವತವಾಗಿ ಸೇರ್ಪಡೆಗೊಳಿಸಲು ಕೊಂಕಣ ರೈಲ್ವೆ ನಿರ್ಧರಿಸಿದೆ.

ನ.5ರಿಂದಲೇ ಈ ರೈಲು ಹೆಚ್ಚುವರಿ ಕೋಚ್‌ಗಳೊಂದಿಗೆ ಸಂಚರಿಸುತ್ತಿದೆ. ಈವರೆಗೆ 14 ಜನರಲ್ ಹಾಗೂ ಎರಡು ಎಸ್‌ಎಲ್‌ಆರ್ ಕೋಚ್‌ಗಳೊಂದಿಗೆ ಸಂಚರಿಸುತಿದ್ದ ರೈಲು ಈಗ 16 ಜನರಲ್ ಹಾಗೂ ಎರಡು ಎಸ್‌ಎಲ್‌ಆರ್ ಸೇರಿದಂತೆ ಒಟ್ಟು 18 ಕೋಚ್‌ಗಳೊಂದಿಗೆ ಓಡಾಟ ನಡೆಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಸಂಚಾರದಲ್ಲಿ ವ್ಯತ್ಯಯ: ಕುಮಟ ಮತ್ತು ಭಟ್ಕಳ ನಿಲ್ದಾಣಗಳ ನಡುವೆ ನ.9ರಂದು ಅಪರಾಹ್ನ 12:00ರಿಂದ 3:00ಗಂಟೆಯವರೆಗೆ ನಿರ್ವಹಣಾ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಅಚಣೆ ತಿಳಿಸಿದೆ.

ನ.8ರಂದು ರೈಲು ನಂ.16585 ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಹಾಗೂ ಮುರ್ಡೇಶ್ವರ ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಭಟ್ಕಳದಲ್ಲೇ ಕೊನೆಗೊಳಿಸಲಾಗುವುದು. ಇದರಿಂದ ರೈಲಿನ ಭಟ್ಕಳ ಮತ್ತು ಮುರ್ಡೇಶ್ವರ ನಡುವಿನ ಸಂಚಾರ ರದ್ದಾಗಲಿದೆ.

ಅದೇ ರೀತಿ ನ.9ರಂದು ಮುರ್ಡೇಶ್ವರದಿಂದ ಹೊರಡಬೇಕಿದ್ದ ರೈಲು ನಂ.16586 ಮುರ್ಡೇಶ್ವರ- ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಅದೇ ಸಮಯಕ್ಕೆ ಭಟ್ಕಳದಿಂದ ತನ್ನ ಸಂಚಾರ ಪ್ರಾರಂಭಿಸಲಿದೆ.

ಅಲ್ಲದೇ ನ.9ರಂದು ಹೊರಡುವ ರೈಲು ನಂ.22114 ಕೊಚ್ಚುವೇಲಿ- ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ರೈಲು ಭಟ್ಕಳ ನಿಲ್ದಾಣದಲ್ಲಿ 20 ನಿಮಿಷ ನಿಲುಗಡೆ ಹೊಂದಲಿದೆ.

ನ.10ರಂದು ರತ್ನಗಿರಿ ಹಾಗೂ ವೈಭವವಾಡಿ ರೋಡ್ ನಡುವೆ ನಿರ್ವಹಣಾ ಕಾಮಗಾರಿ ನಡೆಯಲಿದ್ದು, ಇದರಿಂದಲೂ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಕಂಡುಬರಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News