ಅ.21ಕ್ಕೆ ಕೋಟ ತೆರವುಗೊಳಿಸಿದ ಎಂಎಲ್‌ಸಿ ಸ್ಥಾನಕ್ಕೆ ಚುನಾವಣೆ

Update: 2024-09-19 15:29 GMT

ಉಡುಪಿ, ಸೆ.19: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ ಅವರು ತೆರವುಗೊಳಿಸಿದ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣಾ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ಅ. 21ರಂದು ಚುನಾವಣೆಯನ್ನು ಭಾರತ ಚುನಾವಣಾ ಆಯೋಗ ಘೋಷಿಸಿದೆ.

ಈ ಕ್ಷೇತ್ರವು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯನ್ನು ಹೊಂದಿರುತ್ತದೆ. ಈ ಚುನಾವಣೆಯಲ್ಲಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಮತ್ತು ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು, ಲೋಕಸಭಾ, ರಾಜ್ಯಸಭಾ ಸದಸ್ಯರು, ವಿಧಾನಸಭಾ ಮತ್ತು ವಿಧಾನಪರಿಷತ್‌ನ ಸದಸ್ಯರು ಮತದಾರರಾಗಿರುತ್ತಾರೆ.

ಈ ಒಂದು ಸ್ಥಾನಕ್ಕಾಗಿ ಸೆ.26ರ ಗುರುವಾರ ಅಧಿಸೂಚನೆ ಹೊರಡಿಸಲಿದ್ದು, ಅಕ್ಟೋಬರ್ 3 ಗುರುವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಅ.4ರ ಶುಕ್ರವಾರ ನಾಮಪತ್ರಗಳ ಪರಿಶೀಲನೆ, ಅ.7 ಸೋಮವಾರ ನಾಮಪತ್ರ ಹಿಂದೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ.

ಅಗತ್ಯ ಬಿದ್ದರೆ ಅ.21ರ ಸೋಮವಾರ ಬೆಳಗ್ಗೆ 8:00ರಿಂದ ಸಂಜೆ 4:00 ಗಂಟೆಯವರೆಗೆ ಮತದಾನ ನಡೆಯಲಿದೆ. ಅ.24ರ ಗುರುವಾರ ಮತಗಳ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.

6037 ಮತದಾರರು: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣಾ ಕ್ಷೇತ್ರದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟು 392 ಮತಗಟ್ಟೆಗಳು ಇರಲಿದ್ದು, 6037 ಮಂದಿ ಮತ ಚಲಾಯಿಸುವ ಅರ್ಹತೆ ಪಡೆದಿದ್ದಾರೆ. ಇವುಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 234 ಮತಗಟ್ಟೆಗಳಲ್ಲಿ 3551 ಮತದಾರರು ಹಾಗೂ ಉಡುಪಿ ಜಿಲ್ಲೆಯ 158 ಮತಗಟ್ಟೆಗಳಲ್ಲಿ 2486 ಮತದಾರರು ಮತ ಚಲಾಯಿಸಲಿದ್ದಾರೆ.

ಸ್ಥಳೀಯ ಸಂಸ್ಥೆವಾರು ಮತದಾರರ ವಿವರ

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ 223 ಗ್ರಾಪಂಗಳಿದ್ದು 3292 ಸದಸ್ಯ ರಿದ್ದಾರೆ. ಪ್ರಸ್ತುತ ಇಲ್ಲಿ 3264 ಮಂದಿ ಸದಸ್ಯರಿದ್ದು 28 ಸ್ಥಾನ ಖಾಲಿ ಇವೆ. ಮಂಗಳೂರು ನಗರಪಾಲಿಕೆಯಲ್ಲಿ 60 ಸದಸ್ಯ ಸ್ಥಾನಗಳು ಭರ್ತಿಯಾಗಿವೆ. ಎರಡು ನಗರಸಭೆ ಗಳಲ್ಲಿರುವ ಒಟ್ಟು 62 ಸ್ಥಾನಗಳೂ ಭರ್ತಿಯಾಗಿವೆ.

ಜಿಲ್ಲೆಯ ಮೂರು ಪುರಸಭೆಗಳಲ್ಲಿ ಇರುವ 74 ಸ್ಥಾನಗಳಲ್ಲಿ 73ರಲ್ಲಿ ಸದಸ್ಯರಿದ್ದು, ಒಂದು ಸ್ಥಾನ ಖಾಲಿ ಇದೆ. ಐದು ಪಟ್ಟಣ ಪಂಚಾಯತ್‌ಗಳಲ್ಲಿರುವ ಎಲ್ಲಾ 81 ಸ್ಥಾನಗಳು ಭರ್ತಿಯಾಗಿವೆ. ಅಲ್ಲದೇ ವಿಧಾನಸಭೆಯ ಎಂಟು ಮಂದಿ ಸದಸ್ಯರು, ಓರ್ವ ಲೋಕಸಭಾ ಸದಸ್ಯರು ಹಾಗೂ ಇಬ್ಬರು ವಿಧಾನಪರಿಷತ್ ಸದಸ್ಯರು ಮತದಾನ ಮಾಡಲಿದ್ದಾರೆ.

ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಒಟ್ಟು 234 ಸ್ಥಳೀಯ ಸಂಸ್ಥೆಗಳಲ್ಲಿ 3580 ಸದಸ್ಯರ ಪೈಕಿ 3551 ಸ್ಥಾನ ಭರ್ತಿಯಾಗಿದ್ದು, 29 ಖಾಲಿ ಇವೆ.

ಉಡುಪಿ ಜಿಲ್ಲೆ: ಜಿಲ್ಲೆಯಲ್ಲಿ 153 ಗ್ರಾಪಂಗಳಿದ್ದು 2365 ಸದಸ್ಯರಿದ್ದಾರೆ. ಪ್ರಸ್ತುತ ಇಲ್ಲಿ 2361 ಮಂದಿ ಸದಸ್ಯರಿದ್ದು 4 ಸ್ಥಾನ ಖಾಲಿ ಇವೆ. ಉಡುಪಿ ನಗರಸಭೆಯ ಒಟ್ಟು 35 ಸ್ಥಾನಗಳೂ ಭರ್ತಿಯಾಗಿವೆ. ಜಿಲ್ಲೆಯ ಮೂರು ಪುರಸಭೆಗಳಲ್ಲಿ ಇರುವ 69 ಸ್ಥಾನಗಳೆಲ್ಲ ಭರ್ತಿಯಾಗಿವೆ. ಒಂದು ಪಟ್ಟಣ ಪಂಚಾಯತ್‌ನಲ್ಲಿರುವ ಎಲ್ಲಾ 16 ಸ್ಥಾನಗಳು ಭರ್ತಿಯಾಗಿವೆ. ಅಲ್ಲದೇ ವಿಧಾನಸಭೆಯ ನಾಲ್ವರು ಸದಸ್ಯರು, ಓರ್ವ ಲೋಕಸಭಾ ಸದಸ್ಯರು ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಒಟ್ಟು 158 ಸ್ಥಳೀಯ ಸಂಸ್ಥೆಗಳಲ್ಲಿ 2490 ಸದಸ್ಯರ ಪೈಕಿ 2486 ಸ್ಥಾನ ಭರ್ತಿಯಾಗಿದ್ದು, ನಾಲ್ಕು ಖಾಲಿ ಇವೆ.

ಈ ಚುನಾವಣೆಗಾಗಿ ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News