ಉಡುಪಿ: 15ಕ್ಕೇರಿದ ಕಾಲರಾ ಪ್ರಕರಣಗಳ ಸಂಖ್ಯೆ

Update: 2024-09-19 15:26 GMT

ಉಡುಪಿ: 9 ವರ್ಷಗಳ ಬಳಿಕ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿರುವ ಕಾಲರಾದ 15 ಪ್ರಕರಣಗಳು ಇದುವರೆಗೆ ವರದಿಯಾಗಿವೆ. 2015ರಲ್ಲಿ ಎಂಟು ಪ್ರಕರಣಗಳು ವರದಿಯಾಗಿ ಇಬ್ಬರು ಮೃತಪಟ್ಟ ಬಳಿ ಜಿಲ್ಲೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರಕರಣ ವರದಿಯಾಗಿರಲಿಲ್ಲ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ ತಿಳಿಸಿದ್ದಾರೆ.

ಈ ನಡುವೆ 2019 ಹಾಗೂ 2021ರಲ್ಲಿ ಒಂದೆರಡು ಪ್ರಕರಣಗಳು ವರದಿಯಾಗಿದ್ದರೂ, ಶೀಘ್ರದಲ್ಲೇ ಅದನ್ನು ನಿಯಂತ್ರಣಕ್ಕೆ ತರಲಾಗಿತ್ತು. ಆದರೆ ಈ ಬಾರಿ ಮಲ್ಪೆ ಬಂದರಿನ ಮೂಲಕ ಕಾಲರಾ ಬ್ಯಾಕ್ಟೀರಿಯಾ ಹರಡಿರುವುದು ಸ್ಪಷ್ಟವಾಗಿದೆ ಎಂದವರು ತಿಳಿಸಿದರು.

ಜಿಲ್ಲೆಯಲ್ಲಿ ಮೊದಲ ಕಾಲರಾ ಪ್ರಕರಣ ವರದಿಯಾಗಿದ್ದು ಕಾರ್ಕಳದ ಈದುವಿನಿಂದ. ಅಲ್ಲಿ ಒಟ್ಟು ಐವರಲ್ಲಿ ಇದು ಕಂಡು ಬಂದಿತ್ತು. ಮತ್ತೆ ಮಲ್ಪೆ ಆಸುಪಾಸಿನಲ್ಲಿ 4, ಕಾಪುವಿನಿಂದ 2, ಕೆಮ್ಮಣ್ಣು, ಶಿರ್ವ ಹಾಗೂ ಬೀಜಾಡಿಯಿಂದ ಉಳಿದ ಕೇಸು ಗಳು ವರದಿಯಾಗಿವೆ ಎಂದು ಡಾ.ನಾಗರತ್ನ ತಿಳಿಸಿದರು.

ಈ ಬಾರಿ ಕಾಲರಾ ಮೊದಲು ವರದಿಯಾಗಿದ್ದು ಗೋವಾದಲ್ಲಿ. ಮಳೆಗಾಲ ವಾದ್ದರಿಂದ ಮೀನುಗಾರಿಕೆಗೆ ರಜೆ ಇದ್ದದ್ದರಿಂದ ಅದು ಹೆಚ್ಚು ವಿಸ್ತರಿಸಿರಲಿಲ್ಲ. ನಂತರ ಅದು ಕಂಡುಬಂದಿದ್ದು ಕಾರವಾರ ಬಂದರಿನಲ್ಲಿ. ಕಾರವಾರದಿಂದ ಕಳೆದ ಆಗಸ್ಟ್‌ನಲ್ಲಿ ಉಡುಪಿಗೆ ಪರೀಕ್ಷೆಗಾಗಿ ಕಳುಹಿಸಿದ ಸ್ಯಾಂಪಲ್‌ನಲ್ಲಿ ಇದು ಪತ್ತೆಯಾಗಿತ್ತು. ಉಡುಪಿಯಲ್ಲೂ ಕಾಲರಾದ ಮೂಲವನ್ನು ಹುಡುಕಿದಾಗ ಒಂದು ಬಾರ್‌ಗೆ ಹೋದ ಐವರಲ್ಲಿ ಇದು ಪತ್ತೆಯಾಗಿತ್ತು. ಬಂದರಿನಿಂದ ಬಂದ ಮೀನು ಅಥವಾ ಮೀನನ್ನು ತಂದವರ ಮೂಲಕ ಇದು ಹರಡಿರುವ ಸಾಧ್ಯತೆ ಕಂಡುಬಂದಿತ್ತು ಎಂದರು.

ಸ್ವಚ್ಛತೆಗೆ ಆದ್ಯತೆ ನೀಡಿ: ಕಾಲರಾ ಬಾರದಂತೆ ತಡೆಯಲು ವೈಯಕ್ತಿಕವಾಗಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಶೌಚಕ್ಕೆ ಹೋಗಿ ಬಂದಾಗ ಕೈಕಾಲುಗಳನ್ನು ಚೆನ್ನಾಗಿ ತೊಳೆಯಬೇಕು. ಹೊರಗೆ ಹೋಗಿ ಬಂದಾಗಲೂ ಅದನ್ನು ಅನುಸರಿಸಬೇಕು. ಹೊರಗಿನಿಂದ ತಂದ ಹಣ್ಣು, ತರಕಾರಿ, ಮೀನು, ಮಾಂಸಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಬಳಸಬೇಕು. ತರಕಾರಿ, ಮೀನು, ಮಾಂಸಗಳನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ಅರೆಬರೆ ಬೇಯಿಸಿ ಯಾವುದನ್ನು ತಿನ್ನಬಾರದು.

ಮರುವಾಯಿ ಅಥವಾ ಮೊಳಿ (ಶೆಲ್‌ಫಿಶ್)ಯನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ಮರುವಾಯಿ, ಕಾಲರಾ ಬ್ಯಾಕ್ಟೀರಿಯಾದ ಪ್ರಮುಖ ವಾಹಕ ವಾಗಿದೆ. ಆದುದರಿಂದ ಎಚ್ಚರಿಕೆ ಅಗತ್ಯ. ನೀರನ್ನು ಕಾಯಿಸಿ ಕುಡಿಯಬೇಕು. ಬೀದಿ ಬದಿಯಲ್ಲಿ ತೆರೆದಿಟ್ಟ ಯಾವುದೇ ತಿನಿಸುಗಳನ್ನು, ತಳ್ಳುಗಾಡಿಯಲ್ಲಿ ಮಾರಾಟ ಮಾಡುವ ಆಹಾರವನ್ನು ತಿನ್ನುವಾಗ ಹೆಚ್ಚಿನ ಜಾಗೃತೆ ವಹಿಸಬೇಕು ಎಂದರು.

ವಾಂತಿ ಮತ್ತು ಬೇಧಿ ಈ ರೋಗದ ಪ್ರಮುಖ ಲಕ್ಷಣ. ಸತತ ಬೇಧಿಯಿಂದ ದೇಹ ನಿರ್ಜಲೀಕರಣಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಪದೇ ಪದೇ ನೀರು ಕುಡಿಯುತ್ತಿರಬೇಕು. ವಾಂತಿ-ಬೇಧಿ ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು. ಸೂಕ್ತ ಚಿಕಿತ್ಸೆ ಪಡೆದರೆ ಇದು ಸುಲಭದಲ್ಲಿ ಗುಣವಾಗುವ ರೋಗವಾಗಿದೆ ಎಂದು ಡಾ.ನಾಗರತ್ನ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News