ಕುಂದಾಪುರ: ಅಪೂರ್ಣ ಅರ್ಜಿಗಳನ್ನು ಸರಿಪಡಿಸಿಕೊಳ್ಳಲು ಅವಕಾಶ
ಉಡುಪಿ, ಡಿ.26: ಕುಂದಾಪುರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ವಿವಿಧ ಗ್ರಾಮಪಂಚಾಯತ್, ಪಟ್ಟಣ ಪಂಚಾಯತ್ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಖಾಲಿ ಇರುವ ಒಟ್ಟು 31 ಅಂಗನವಾಡಿ ಕಾರ್ಯಕರ್ತೆ ಹಾಗೂ 52 ಅಂಗನವಾಡಿ ಸಹಾಯಕಿಯರ ಗೌರವಸೇವೆ ಹುದ್ದೆಗಳಿಗೆ ಕಳೆದ ಆಗಸ್ಟ್ 16ರಂದು ನೇಮಕಾತಿ ಅಧಿಸೂಚನೆ ಹೊರಡಿಸಿ, ಸೆ.19ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು.
ಪ್ರಸ್ತುತ ಅರ್ಜಿ ಸಲ್ಲಿಸುವ ಕಾಲಾವಧಿ ಮುಗಿದಿದ್ದು, ಅರ್ಜಿ ಸಲ್ಲಿಸುವಾಗ ವೆಬ್‌ಸೈಟ್‌ನಲ್ಲಿ ಒಟ್ಟು 4 ವಿವಿಧ ಹಂತಗಳಿದ್ದು, ಇದರಲ್ಲಿ ಕೆಲವು ಅರ್ಜಿದಾರರಿಗೆ 1ನೇ ಹಂತದಲ್ಲಿಯೇ - ಅಫ್ಲಿಕೇಷನ್ ಸಕ್ಸಸ್‌ಫುಲಿ ಅಪ್ ಲೋಡೆಡ್ ಎಂಬ ಸಂದೇಶ ಗಳನ್ನು ಅವರ ಮೊಬೈಲ್ ಸ್ವೀಕರಿಸಿದ್ದು, ಅರ್ಜಿಗಳನ್ನು ಪೂರ್ಣಗೊಳಿಸಿರುವುದಿಲ್ಲ. ಕುಂದಾಪುರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಹೀಗೆ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ 225 ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗೆ 101 ಅಪೂರ್ಣ ಅರ್ಜಿಗಳು ಸ್ವೀಕೃತವಾಗಿವೆ.
ಅರ್ಜಿ ಸಲ್ಲಿಸುವ 4 ಹಂತಗಳನ್ನು ಪೂರ್ಣಗೊಳಿಸದೇ ಅಪೂರ್ಣ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ಡಿಸೆಂಬರ್ 26ರಿಂದ ಜನವರಿ 5ರವರೆಗೆ ಅರ್ಜಿಗಳನ್ನು ಪೂರ್ಣಗೊಳಿಸಲು ವೆಬ್‌ಸೈಟ್‌ನಲ್ಲಿ ಇಲಾಖೆ ವತಿಯಿಂದಲೇ ಅವಕಾಶ ನೀಡಿ ಸರಕಾರವು ಆದೇಶಿಸಿದೆ. ಅಪೂರ್ಣ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಒಂದನೇ ಹಂತದಲ್ಲಿ - ಆನ್‌ಲೈನ್ ತಂತ್ರಾಂಶದಲ್ಲಿ ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿ ಭರ್ತಿ ಮಾಡುವುದು, ಎರಡನೇ ಹಂತದಲ್ಲಿ - ತಮ್ಮ ಭಾವಚಿತ್ರ ಹಾಗೂ ಸಹಿಯನ್ನು ಅಪ್‌ಲೋಡ್ ಮಾಡುವುದು, ಮೂರನೇ ಹಂತದಲ್ಲಿ- ತಮ್ಮ ದಾಖಲಾತಿಗಳನ್ನು ಅಪ್‌ಲೋಡ್ ಮಾಡುವುದು ಹಾಗೂ ನಾಲ್ಕನೇ ಹಂತದಲ್ಲಿ ತಮ್ಮ ಆಧಾರ್ ಸಂಖ್ಯೆ ನಮೂದಿಸಿ, ಇ-ಹಸ್ತಾಕ್ಷರದೊಂದಿಗೆ ಅರ್ಜಿಯನ್ನು ಪೂರ್ಣಗೊಳಿಸಬೇಕು.
ಅಗತ್ಯವಿರುವ ಎಲ್ಲಾ ದಾಖಲಾತಿಗಳು ಸೆ.19ರ ಒಳಗೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ಪಡೆದಿರುವುದು ಕಡ್ಡಾಯವಾಗಿದ್ದು, ತದನಂತರದ ದಿನಾಂಕದಿಂದ ಪಡೆಯಲಾದ ದಾಖಲಾತಿಗಳನ್ನು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಆಯ್ಕೆಗೆ ಪರಿಗಣಿಸಲಾಗುವುದಿಲ್ಲ.
ಅಪೂರ್ಣವಾದ ಅರ್ಜಿಗಳ ಅರ್ಜಿ ಸಂಖ್ಯೆ ಹಾಗೂ ಇತರೆ ವಿವರಗಳನ್ನೊಳಗೊಂಡ ಮಾಹಿತಿಯು ಕುಂದಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಸೂಚನಾ ಫಲಕದಲ್ಲಿ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ಕುಂದಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.