‘ಕೆಪಿಎಸ್‌ಸಿ ಪೂರ್ವಭಾವಿ ಮರುಪರೀಕ್ಷೆ: ನಿಯಮಗಳನ್ನು ಪಾಲಿಸಿ’

Update: 2024-12-26 14:34 GMT

ಉಡುಪಿ: ಕರ್ನಾಟಕ ಲೋಕಸೇವಾ ಆಯೋಗದಿಂದ ಡಿ.೨೯ ರಂದು ನಡೆಯಲು ನಿಗದಿಯಾಗಿರುವ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್ ಎ ಮತ್ತು ಬಿ ವೃಂದದ ನೇಮಕಾತಿಯ ಪೂರ್ವಭಾವಿ ಮರು ಪರೀಕ್ಷೆ ಉಡುಪಿ ಜಿಲ್ಲೆಯ ನಿಗದಿತ ಐದು ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಈ ಪರೀಕ್ಷೆಗೆ ಹಾಜರಾಗುವ ಪರೀಕ್ಷಾರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗದ ಸೂಚಿಸಿರುವ ಈ ಕೆಳಗಿನ ನಿಯಮ ಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ತಿಳಿಸಿದ್ದಾರೆ.

ಅಭ್ಯರ್ಥಿಗಳು ಡೌನ್‌ಲೋಡ್ ಮಾಡಿಕೊಂಡ ಪ್ರವೇಶ ಪತ್ರವನ್ನು ಹಾಗೂ ಅಭ್ಯರ್ಥಿಯ ಭಾವಚಿತ್ರವಿರುವ ಮೂಲ ಗುರುತಿನ ಚೀಟಿಯನ್ನು ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಹಾಜರುಪಡಿಸಿದ ನಂತರವೇ ಪರೀಕ್ಷಾ ಉಪ ಕೇಂದ್ರವನ್ನು ಪ್ರವೇಶಿಸಲು ಅನುಮತಿ ನೀಡಲಾಗುವುದು. ಮೂಲ ಗುರುತಿನ ಚೀಟಿ ಹಾಜರುಪಡಿಸದ ಅಭ್ಯರ್ಥಿಗಳಿಗೆ ಪರೀಕ್ಷಾ ಉಪಕೇಂದ್ರವನ್ನು ಪ್ರವೇಶಿಸಲು ಅನುಮತಿ ಇರುವುದಿಲ್ಲ ಎಂದವರು ತಿಳಿಸಿದ್ದಾರೆ.

ಅಭ್ಯರ್ಥಿಗಳು ಪರೀಕ್ಷಾ ದಿನಗಳಂದು ಬೆಳಗ್ಗಿನ ಹಾಗೂ ಮಧ್ಯಾಹ್ನದ ಅಧಿವೇಶನಗಳ ಪರೀಕ್ಷೆ ಪ್ರಾರಂಭವಾಗುವ ಎರಡು ಗಂಟೆ ಮೊದಲು ಕಡ್ಡಾಯವಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಮೊಬೈಲ್, ಕ್ಯಾಲ್ಕುಲೇಟರ್, ಸ್ಮಾರ್ಟ್ ವಾಚ್ ಇತ್ಯಾದಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬ್ಯಾಗ್‌ನಲ್ಲಿ ಇರಿಸಿ, ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವಂತಿಲ್ಲ. ಶೂ, ಸಾಕ್ಸ್, ಸ್ವೆಟರ್ ಮತ್ತು ಜರ್ಕಿನ್ ಇತರೆ ವಸ್ತುಗಳನ್ನು ಧರಿಸುವುದನ್ನು ಸಹ ನಿಷೇಧಿಸಲಾಗಿದ್ದು, ಸಾಧಾರಣ ಚಪ್ಪಲಿಯನ್ನು ಧರಿಸಿ ಪರೀಕ್ಷೆಗೆ ಹಾಜರಾಗಬೇಕು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯೊಳಗೆ ಯಾವುದೇ ಆಧುನಿಕ ಉಪಕರಣ ಗಳಾದ ಮೊಬೈಲ್, ಬ್ಲ್ಯೂಟೂಥ್, ಕ್ಯಾಲ್ಕುಲೇಟರ್, ವೈಟ್‌ಫ್ಲ್ಯೂಡ್, ವೈರ್‌ಲೆಸ್ ಸೆಟ್ಸ್, ಪೇಪರ್, ಬುಕ್ಸ್, ಕಿವಿಯಲ್ಲಿ ಯಾವುದೇ ಎಲೆಕ್ಟ್ರಾನಿಕ್ ಡಿವೈಸ್ ಮತ್ತು ಮೈಕ್ರೋಫೋನ್ ತೆಗೆದುಕೊಂಡು ಹೋಗಲು ಅವಕಾಶ ಇರುವುದಿಲ್ಲ. ತುಂಬು ತೋಳಿನ ಶರ್ಟ್, ಮಂಗಳ ಸೂತ್ರ ಹಾಗೂ ಕಾಲುಂಗುರಗಳನ್ನು ಹೊರತುಪಡಿಸಿ ಯಾವುದೇ ಆಭರಣಗಳನ್ನು, ಜಾಕೆಟ್ ಮತ್ತು ಸ್ವೆಟರ್‌ಗಳನ್ನು ಧರಿಸಿ ಹಾಜರಾಗುವುದನ್ನು ಮತ್ತು ಮೆಟಲ್ ವಾಟರ್ ಬಾಟಲ್ ಅಥವಾ ನಾನ್ ಟ್ರಾನ್ಸಫರೆಂಟ್ ವಾಟರ್ ಬಾಟಲ್‌ಗಳನ್ನು ಪರೀಕ್ಷಾ ಕೊಠಡಿಯೊಳಗೆ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.

ಕಿವಿ, ಬಾಯಿಯನ್ನು ಮುಚ್ಚಿಕೊಳ್ಳುವಂತೆ ಅಥವಾ ಯಾವುದೇ ರೀತಿಯ ಫಿಲ್ಟರ್ ಇರುವ ಫೇಸ್‌ಮಾಸ್ಕ್ ಧರಿಸಿ ಪರೀಕ್ಷಾ ಕೊಠಡಿಗೆ ಪ್ರವೇಶಿಸಲು ಅನುಮತಿ ನೀಡಲಾಗುವುದಿಲ್ಲ. ಧಾರ್ಮಿಕ ಆಚರಣೆಗೆ ಸಂಬಂಧಿಸಿದ ವಸ್ತುಗಳನ್ನು ಧರಿಸಿ ಬರುವ ಅಭ್ಯರ್ಥಿಗಳು ಮತ್ತು ಹಿಯರಿಂಗ್ ಏಡ್ ಉಪಕರಣ ಧರಿಸಿರುವ ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ಎರಡು ಗಂಟೆ ಮುಂಚಿತವಾಗಿ ಸಂಪೂರ್ಣ ವಿಶೇಷ ತಪಾಸಣೆಗೆ ಒಳಪಡಬೇಕು. ಹಿಯರಿಂಗ್ ಏಡ್ ಉಪಕರಣ ಧರಿಸಿರುವ ಅಭ್ಯರ್ಥಿ ಗಳು ವೈದ್ಯಕೀಯ ದಾಖಲೆಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.

ಎರಡನೇ ಹಂತದಲ್ಲಿ ಪರೀಕ್ಷಾ ತಪಾಸಣೆ ನಡೆಸಿದ ನಂತರ ಎಲ್ಲಾ ಅಭ್ಯರ್ಥಿಗಳ ಗುರುತಿನ ದಾಖಲೆ/ ಚೀಟಿ ಮತ್ತು ಪ್ರವೇಶ ಪತ್ರವನ್ನು ಕಡ್ಡಾಯವಾಗಿ ಪರಿಶೀಲಿಸಿ, ನಂತರವೇ ಪರೀಕ್ಷಾ ಉಪಕೇಂದ್ರದ ಒಳಗೆ ಪ್ರವೇಶ ನೀಡಲಾಗುವುದು.

ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗವು ೨೦೨೩-೨೪ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ಎ ಮತ್ತು ಬಿ ವೃಂದದ ನೇಮಕಾತಿಯ ಪೂರ್ವಭಾವಿ ಮರು ಪರೀಕ್ಷೆಯ ಪ್ರವೇಶ ಪತ್ರವನ್ನು ವೆಬ್‌ಸೈಟ್ -http://kpsc.kar.nic.in-ನಲ್ಲಿ ಡೌನ್‌ಲೋಡ್ ಮಾಡಿ ಕೊಳ್ಳಬಹುದು. ಈ ಪರೀಕ್ಷೆಯ ವೇಳಾಪಟ್ಟಿಯು ಆಯೋಗದ ವೆಬ್‌ಸೈಟ್ ನಲ್ಲಿ ಲಭ್ಯವಿರುತ್ತದೆ.

ತಮ್ಮದೇ ಆದ ಲಿಪಿಕಾರರನ್ನು ಕರೆತರುವ ಅಂಗವಿಕಲ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರದೊಂದಿಗೆ ಲಿಪಿಕಾರರ ಪ್ರವೇಶ ಪತ್ರವನ್ನು ಸಹ ಡೌನ್‌ಲೋಡ್ ಮಾಡಿಕೊಳ್ಳಬೇಕು. ಪರಿಷ್ಕೃತ ಪ್ರವೇಶ ಪತ್ರವನ್ನು ಮಾತ್ರ ಪರಿಗಣಿಸಲಾ ಗುವುದು ಎಂದು ಅಪರ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News