ಉಡುಪಿ: ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರಿಂದ ಧರಣಿ

Update: 2024-09-19 14:20 GMT

ಉಡುಪಿ, ಸೆ.19: ಕೆಲಸದ ಖಾಯಂಮಾತಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರಿಗೆ ನೀಡುವ ಗೌರವ ಧನದಲ್ಲಿ ಹೆಚ್ಚಳವೂ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಅಂಗನ ವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ನೇತೃತ್ವದಲ್ಲಿ ನೂರಾರು ಮಂದಿ ಅಂಗನವಾಡಿ ನೌಕರರು ಇಂದು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಿದರು.

1975ರಲ್ಲಿ ಪ್ರಾರಂಭಗೊಂಡಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಯಡಿಯಲ್ಲಿ ರಾಜ್ಯದಲ್ಲಿ 1.30 ಲಕ್ಷದಷ್ಟು ಅಂಗನ ವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕನಿಷ್ಠ ಗೌರವಧನದೊಂದಿಗೆ ದುಡಿಯುತಿದ್ದಾರೆ. ಮಕ್ಕಳು ಹಾಗೂ ಮಹಿಳೆಯರ ಅಭಿವೃದ್ಧಿಗಾಗಿ ಸರಕಾರಗಳು ಜಾರಿಗೊಳಿಸುವ ಅನೇಕ ಕಾರ್ಯಕ್ರಮಗಳನ್ನು ಇವರು ನಿಸ್ವಾರ್ಥದಿಂದ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮಾಡುತಿದ್ದಾರೆ ಎಂದು ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷೆ ಫಿಲೋಮಿನಾ ಫೆರ್ನಾಂಡೀಸ್ ತಿಳಿಸಿದರು.

ಮಕ್ಕಳ ಆರೋಗ್ಯ, ಪೌಷ್ಠಿಕ ಆಹಾರ, ಲಾಲನೆ-ಪಾಲನೆ, ಗರ್ಭಿಣಿ, ಬಾಣಂತಿಯರಿಗೆ ಪೂರಕ ಪೌಷ್ಠಿಕ ಆಹಾರ ನೀಡುವ, ಆರೋಗ್ಯದ ಕಾಳಜಿ ವಹಿಸುವ ಅಂಗನವಾಡಿ ಉದ್ಯೋಗಿಗಳಿಗೆ ಸರಕಾರಗಳು ಸಾಮಾಜಿಕ, ಆರ್ಥಿಕ ಭದ್ರತೆಯನ್ನು ಒದಗಿಸದೇ, ಕೇವಲ ದುಡಿಮೆಗಾಗಿ ಬಳಸಿಕೊಳ್ಳುವ ಶೋಷಣಾತ್ಮಕ ಧೋರಣೆಯನ್ನು ತೋರುತ್ತಾ ಬಂದಿದೆ ಎಂದು ಆರೋಪಿಸಿದ ಅವರು ತಮ್ಮ ಬೇಡಿಕೆಗಳ ಈಡೇರಿಕೆಗೆ ಸೂಕ್ತ ಕ್ರಮವನ್ನು ಕೂಡಲೇ ತೆಗೆದುಕೊಳ್ಳುವಂತೆ ಸರಕಾರವನ್ನು ಆಗ್ರಹಿಸಿದರು.

ಪ್ರಮುಖ ಬೇಡಿಕೆಗಳು: ಅಂಗನವಾಡಿ ಕಾರ್ಯಕರ್ತೆಯರನ್ನು ಖಾಯಂ ಗೊಳಿಸಬೇಕು. ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ನೀಡುವ ಗೌರವಧನವನ್ನು ಕ್ರಮವಾಗಿ 15,000ರೂ. ಹಾಗೂ 10,000ರೂ.ಗಳಿಗೆ ಹೆಚ್ಚಿಸಬೇಕು. ನಿವೃತ್ತರಾದವರಿಗೆ ಮೂರು ಲಕ್ಷ ರೂ.ಗಳ ಇಂಡುಗಂಟು ನೀಡಬೇಕು.

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಗ್ರಾಜ್ಯುಟಿ ಪಡೆಯಲ ಅರ್ಹರು ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ಈಗಾಗಲೇ ನಿವೃತ್ತರಾಗಿರುವ ಎಲ್ಲರಿಗೂ ಅನ್ವಯಿಸುವಂತೆ ನೀಡಲು ಗ್ರಾಜ್ಯುಟಿ ತೀರ್ಪನ್ನು ಜಾರಿಗೊಳಿಸ ಬೇಕು. ಇದನ್ನು 2023ರ ಎ.1ರಿಂದ ನಿವೃತ್ತರಾದ ಎಲ್ಲರಿಗೂ ಜಾರಿಗೊಳಿಸುವ ಆದೇಶ ಹೊರಡಿಸಿ ಹಣ ಬಿಡುಗಡೆ ಮಾಡಬೇಕು.

ಈಗಾಗಲೇ ಎರಡು ತಿಂಗಳಿಂದ ನೀಡದಿರುವ ಗೌರವಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಪ್ರತಿ ತಿಂಗಳ 5ನೇ ತಾರೀಕಿನೊಳಗೆ ಇದನ್ನು ನೀಡಬೇಕು. ಈಗಾಗಲೇ ನಿವೃತ್ತರಾದ ನೌಕರರಿಗೂ ಎನ್‌ಪಿಎಸ್ ಹಾಗೂ ಇಡಂಗಟನ್ನು ಕೂಡಲೇ ಪಾವತಿಸಬೇಕು. ಫಲಾನುಭವಿಗಳಿಗೆ ನೀಡುವ ಮೊಟ್ಟೆಯ ಹಣವನ್ನು ಆಯಾ ತಿಂಗಳು ಪಾವತಿಸುವ ವ್ಯವಸ್ಥೆ ಯಾಗಬೇಕು.

ಪುರುಷ ಸಿಬ್ಬಂದಿಗಳಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ತುಂಬಾ ತೊಂದರೆಯಾಗುತ್ತಿರುವ ದೂರುಗಳಿದ್ದು, ಅಂತಹವರನ್ನು ತಕ್ಷಣ ಬದಲಾಯಿಸಬೇಕು. ಕಳಪೆ ಗುಣಮಟ್ಟದ ಸಮವಸ್ತ್ರವನ್ನು ವಾಪಾಸು ಪಡೆಯ ಬೇಕು ಹಾಗೂ ಪ್ರತಿವರ್ಷ ಒಂದೇ ರೀತಿಯ ಸಮವಸ್ತ್ರ ನೀಡಬೇಕು.

ಯಾವುದೇ ಕಾರ್ಯಕ್ರಮಗಳು ನಡೆದಾಗ ಇಲಾಖೆಯೇ ಅದರ ಜವಾಬ್ದಾರಿ ತೆಗೆದುಕೊಳ್ಳಬೇಕು. ಅಂಗನವಾಡಿ ಕಾರ್ಯ ಕರ್ತೆಯರನ್ನು ಅದಕ್ಕೆ ಹೊಣೆಗಾರರನ್ನಾಗಿ ಮಾಡಬಾರದು. ಬಿಎಲ್‌ಓ ಕಾರ್ಯಕ್ಕೆ ನಿಯೋಜನೆ ಮಾಡಿರುವ ಕಾರ್ಯಕರ್ತೆ ಯರಿಗೆ ಪ್ರತಿವರ್ಷ ಸಂಭಾವನೆಯನ್ನು ಕಾಲಕಾಲಕ್ಕೆ ನೀಡಬೇಕು.

ಧರಣಿನಿರತರು ತಮ್ಮ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಅವರು ಧರಣಿ ನಿರತರಿಂದ ಮನವಿಯನ್ನು ಸ್ವೀಕರಿಸಿದರು.

ಸಂಘದ ಜಿಲ್ಲಾಧ್ಯಕ್ಷೆ ಫಿಲೋಮಿನಾ ಫೆರ್ನಾಂಡೀಸ್, ಜಿಲ್ಲಾ ಕಾರ್ಯದರ್ಶಿ ಬೇಬಿ ಶೆಟ್ಟಿ ಹಾಗೂ ಕೋಶಾಧಿಕಾರಿ ಪದ್ಮಾವತಿ ಅಮೀನ್ ಅವರ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಜಿಲ್ಲೆಯಾದ್ಯಂತದಿಂದ ಆಗಮಿಸಿದ ನೂರಾರು ಅಂಗನವಾಡಿ ಕಾರ್ಯ ಕರ್ತೆಯರು ಹಾಗೂ ಸಹಾಯಕಿಯರ ಪಾಲ್ಗೊಂಡಿದ್ದರು.








 


 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News