ನ.22ರಿಂದ ಕೋಟೇಶ್ವರದಲ್ಲಿ ಕರ್ನಾಟಕ ರಾಜ್ಯ ನೇತ್ರತಜ್ಞರ ಸಂಘದ ವಾರ್ಷಿಕ ಸಮ್ಮೇಳನ
ಉಡುಪಿ, ನ.20: ಕರ್ನಾಟಕ ರಾಜ್ಯ ನೇತ್ರ ತಜ್ಞರ ಸಂಘದ 43ನೇ ವಾರ್ಷಿಕ ಸಮ್ಮೇಳನ ‘ಕೊಸ್ಕಾನ್-2024’ ಈ ಬಾರಿ ಉಡುಪಿ ಜಿಲ್ಲೆಯ ಕೋಟೇಶ್ವರದ ಯುವ ಮೆರಿಡಿಯನ್ ಕನ್‌ವೆನ್ಷನ್ ಸೆಂಟರ್‌ನಲ್ಲಿ ನ.22ರಿಂದ 24ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ ಎಂದು ಸಂಘದ ಅಧ್ಯಕ್ಷ, ಖ್ಯಾತ ನೇತ್ರತಜ್ಞ ಡಾ.ಕೃಷ್ಣಪ್ರಸಾದ್ ಕೂಡ್ಲು ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮ್ಮೇಳನ ಉಡುಪಿ ನೇತ್ರತಜ್ಞರ ಸಂಘ, ಮಣಿಪಾಲದ ಮಾಹೆ ಹಾಗೂ ಐಬೀಚ್ ಫಿಲ್ಮ್ ಫೆಸ್ಟಿವಲ್ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ವಿಜ್ಞಾನ ಮತ್ತು ಪರಂಪರೆ ಎಂಬ ಘೋಷಣಾ ವಾಕ್ಯದೊಂದಿಗೆ ನಡೆಯಲಿದೆ ಎಂದು ತಿಳಿಸಿದರು.
ಸಮ್ಮೇಳನದಲ್ಲಿ ನೇತ್ರ ವಿಜ್ಞಾನದ ನೂತನ ಆವಿಷ್ಕಾರ, ತಂತ್ರಜ್ಞಾನದ ಬಳಕೆಯಲ್ಲಾಗಿರುವ ಪ್ರಗತಿಯ ಚಿತ್ರಣ ಹಾಗೂ ನಾಡಿನ ಪರಂಪರೆಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ದೇಶದ ಖ್ಯಾತನಾಮ ನೇತ್ರತಜ್ಞರಿಂದ ದಿಕ್ಸೂಚಿ ಭಾಷಣಗಳು, 150ಕ್ಕೂ ಅಧಿಕ ತಾಂತ್ರಿಕ ಪ್ರಸ್ತುತಿ, 100ಕ್ಕೂ ಅಧಿಕ ಸಂಶೋಧನಾ ವಿಷಯಗಳು ಮಂಡನೆ ಯಾಗಲಿವೆ ಎಂದರು.
ದೇಶಾದ್ಯಂತದಿಂದ ಬರುವ 2000ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುವ ಈ ಸಮ್ಮೇಳನವನ್ನು ನ.22ರ ಸಂಜೆ 5:30ಕ್ಕೆ ಕೇಂದ್ರದ ಶಕ್ತಿ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಶ್ರೀಪಾದ ಎಸ್ಸೋ ನಾಯಕ್ ಉದ್ಘಾಟಿಸುವರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಕಿರಣ್‌ಕುಮಾರ್ ಕೊಡ್ಗಿ, ಕೂಡ್ಲಿಗಿ ಶಾಸಕ ಎನ್.ಟಿ. ಶ್ರೀನಿವಾಸ್, ಗೋವಾ ಶಾಸಕ ಚಂದ್ರಕಾಂತ್ ಶೆಟ್ಟಿ, ಕ್ರಿಕೆಟರ್ ಸೈಯದ್ ಕಿರ್ಮಾನಿ, ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಮುಂತಾದವರು ಭಾಗವಹಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನ ಸಂಘಟನಾ ಸಮಿತಿಯ ಡಾ.ಯೋಗೀಶ್ ಕಾಮತ್, ಡಾ.ಶಮಂತ್ ಶೆಟ್ಟಿ, ಡಾ.ಶೈಲಜಾ ಶೆಣೈ ಉಪಸ್ಥಿತರಿದ್ದರು.