''ಬಿಎಸ್ಸೆನ್ನೆಲ್ ಟವರ್ ಗಳಿಗೆ ಕಳಪೆ ಗುಣಮಟ್ಟದ ಬ್ಯಾಟರಿ, ಸೋಲಾರ್ ಪ್ಯಾನೆಲ್ ಪೂರೈಕೆ''

Update: 2024-11-21 07:29 GMT

ಉಡುಪಿ, ನ.21: ಉಡುಪಿ -ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಣಿಪಾಲ ರಜತಾದ್ರಿಯ ಸಂಸದರ ಕಚೇರಿಯಲ್ಲಿ ಬುಧವಾರ ಬಿಸ್ಸೆನ್ನೆಲ್ ಅಧಿಕಾರಿಗಳ ಸಭೆ ಕರೆದು ಸಮಸ್ಯೆಗಳ ಕುರಿತು ಚರ್ಚಿಸಿದರು. ಬ್ಯಾಟರಿ ಕೊರತೆ ಕಾರಣ ಸುಮಾರು 60ಕ್ಕೂ ಅಧಿಕ ಟವರ್ ಗಳು ಕಾರ್ಯನಿರ್ವಹಿಸಲು ತೊಂದರೆಯಾಗುತ್ತಿವೆ. ಕೆಲವು ಕಡೆಗಳಲ್ಲಿ ಜನರೇಟರ್ ವ್ಯವಸ್ಥೆ ಇದ್ದರೂ ನಿರ್ವಹಣೆ ಕೊರತೆ, ಗುತ್ತಿಗೆದಾರರ ಸಮಸ್ಯೆಯಿಂದ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಈ ಕುರಿತು ಇಲಾಖೆ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಈ ವೇಳೆ ಅಧಿಕಾರಿಗಳು, ಬ್ಯಾಟರಿ ಮತ್ತು ಸೋಲಾರ್ ಪ್ಯಾನೆಲ್ಗಳು ಕಳಪೆ ಗುಣಮಟ್ಟದಲ್ಲಿ ಬರುತ್ತಿರುವುದರಿಂದ ಗುಣಮಟ್ಟದ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಸಮಸ್ಯೆ ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಸಂಬಂಧಿತ ಕೇಂದ್ರ ಸಚಿವರಿಗೆ ಪತ್ರ ಬರೆದು ಈ ಬಗ್ಗೆ ಗಮನ ಸೆಳೆಯುವುದಾಗಿ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಬ್ಯಾಟರಿಗಳು ಬಂದಿವೆ ಆದರೆ ಅಳವಡಿಸಿಲ್ಲ. ಗುತ್ತಿಗೆದಾರರು ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಸಾಕಷ್ಟು ತೊಂದರೆಗಳಾಗಿದೆ ಎಂದರು. ಅಗತ್ಯವಿದ್ದರೆ ಪ್ರಕರಣ ದಾಖಲಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಸದರು ಸೂಚಿಸಿದರು.

ಉಡುಪಿ ಜಿಲ್ಲೆಯಲ್ಲಿ ಬಿಎಸ್ಸೆನ್ನೆಲ್ ನ 191 ಟವರ್ ಗಳಿದ್ದು, ಅವುಗಳ ಪೈಕಿ ಬಹಳಷ್ಟು ಟವರ್ ಗಳು 3ಜಿಯಿಂದ 4ಜಿಗೆ ಮೇಲ್ದರ್ಜೆಗೇರಲು ವಿಳಂಬವಾಗುತ್ತಿವೆ ಎಂದು ಸಂಸದರು ಆಕ್ಷೇಪಿಸಿದರು. ಬಿಎಸ್ಸೆನ್ನೆಲ್ ಟವರ್ ನಿರ್ವಹಣೆಗೆ ಪೈಲೆಟ್ ಯೋಜನೆಯನ್ನು ಯೋಜಿಸಿರುವುದಾಗಿ ತಿಳಿಸಿದ ಸಂಸದರು, ಗ್ರಾಪಂ ಮಟ್ಟದಲ್ಲಿ ನಿರ್ವಹಣೆಗೆ 20 ಗ್ರಾಮಗಳನ್ನು ಪೈಲೆಟ್ ಆಗಿ ಆಯ್ಕೆ ಮಾಡಿ ನಿರ್ವಹಣೆ ಜವಾಬ್ದಾರಿಯನ್ನು ಅವರಿಗೆ ನೀಡುವುದಕ್ಕೆ ಆಲೋಚನೆ ಮಾಡಲಾಗುವುದು ಎಂದು ಹೇಳಿದರು. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

30ಕ್ಕೂ ಹೆಚ್ಚು ಹೊಸ ಟವರ್ ಗಳಿಗೆ ಪ್ರಸ್ತಾವ

ಸುಮಾರು 30ಕ್ಕೂ ಅಧಿಕ ಹೊಸ ಟವರ್ ಗಳಿಗೆ ಪ್ರಸ್ತಾವ ಸಲ್ಲಿಕೆಯಾಗಿದೆ. ಈ ಎಲ್ಲಾ ಟವರ್ ಗಳಿಗೂ ತಕ್ಷಣ ಅನುಮತಿ ನೀಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೇಂದ್ರ ಸರಕಾರದ ಪ್ರತಿಷ್ಠಿತ ಇಲಾಖೆಯಾಗಿರುವ ಬಿಎಸ್ಸೆನ್ನೆಲ್ ಖಾಸಗಿ ಕಂಪೆನಿಗಳಿಗೆ ಸಡ್ಡು ಹೊಡೆಯುವಂತೆ ಬೆಳೆಯಬೇಕು. ಆಗ ಮಾತ್ರ ಜನರಿಗೆ ವಿಶ್ವಾಸ ಬರುವುದಕ್ಕೆ ಸಾಧ್ಯ. ಎಲ್ಲಾ ಅಧಿಕಾರಿಗಳು ಒಟ್ಟಾಗಿ ಈ ಕುರಿತು ಕೆಲಸ ಮಾಡಿ ಹಳ್ಳಿಹಳ್ಳಿಗೂ ನೆಟ್ವರ್ಕ್ ಸಂಪರ್ಕ ಸಿಗುವಂತೆ ಮಾಡಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಬಿಸ್ಸೆನ್ನೆಲ್ ಡಿಜಿಎಂ ನವೀನ್ ಗುಪ್ತ, ಎ.ಜಿ.ಆರ್. ಎಂ.ಬಿಂದೂ ಮುರಳೀಧರ್ ಮೊದಲಾದವರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News