ಕುಂದಾಪುರ | ಹೆಜ್ಜೇನು ದಾಳಿ: ಕೋಟತಟ್ಟು ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷೆ ಸಹಿತ ಮೂವರು ಆಸ್ಪತ್ರೆಗೆ ದಾಖಲು
ಕುಂದಾಪುರ: ಹೆಜ್ಜೇನು ದಾಳಿಯಿಂದ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ- ಉಪಾಧ್ಯಕ್ಷೆ ಸಹಿತ ಮೂವರು ಗಾಯಗೊಂಡ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ.
ಗ್ರಾಪಂ ಉಪಾಧ್ಯಕ್ಷೆ ಸರಸ್ವತಿ ಹಾಗೂ ಅವರ ಪುತ್ರಿ ಸೌಜನ್ಯಾರ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಈ ವೇಳೆ ಅವರ ನೆರವಿಗೆ ಧಾವಿಸಿದ ಗ್ರಾಪಂ ಅಧ್ಯಕ್ಷ ಸತೀಶ್ ಬಿ. ಕುಂದರ್ ಅವರ ಮೇಲೂ ಜೇನು ನೊಣಗಳು ದಾಳಿ ಮಾಡಿವೆ.
ಸರಸ್ವತಿ ಹಾಗೂ ಸೌಜನ್ಯಾ ಇಂದು ಬೆಳಗ್ಗೆ ಕಲ್ಮಾಡಿ ರಸ್ತೆಯಲ್ಲಿರುವ ನಾಗಬನಕ್ಕೆ ಹೋಗಿದ್ದ ವೇಳೆ ಅವರ ಮೇಲೆ ಹೆಜ್ಜೇನು ಹಿಂಡು ಏಕಾಏಕಿ ದಾಳಿ ನಡೆಸಿದೆ. ಈ ಸಂದರ್ಭ ಅವರ ಬೊಬ್ಬೆ ಕೇಳಿ ಸಹಾಯಕ್ಕೆ ಧಾವಿಸಿದ್ದ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಕೂಡ ಜೇನು ನೊಣಗಳ ಕಡಿತಕ್ಕೆ ಒಳಗಾಗಿದ್ದಾರೆ.
ಬಳಿಕ ಅಕ್ಕ ಪಕ್ಕದ ಮನೆಯವರು ಸ್ಥಳಕ್ಕೆ ಧಾವಿಸಿ ಈ ಮೂವರನ್ನು ರಕ್ಷಿಸಿದ್ದಾರೆ.
ಗಾಯಾಳುಗಳನ್ನು ತಕ್ಷಣ ಜೀವನ್ ಮಿತ್ರ ನಾಗರಾಜ್ ಪುತ್ರನ್ ಅವರು ಆ್ಯಂಬುಲೆನ್ಸ್ ನಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.