ಜ.24-26: ಆರೋಗ್ಯ ಇಲಾಖೆಯ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ

Update: 2025-01-13 12:15 GMT

ಉಡುಪಿ, ಜ.13: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ, ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘಗಳ ಸಹಯೋಗದೊಂದಿಗೆ ಎನ್‌ಟಿಪಿಇ ಟೀಮ್ ಉಡುಪಿ, ಆರೋಗ್ಯ ಇಲಾಖೆಯ ಆಕ್ಟಿವ್ ಬಾಯ್ಸ್ ಸಾರಥ್ಯದಲ್ಲಿ ಕ್ಷಯ ಮುಕ್ತ ಉಡುಪಿಗೆ ಮೊದಲ ಹೆಜ್ಜೆಯಾಗಿ ‘ಎನ್‌ಟಿಇಪಿ-ಸ್ವಾಸ್ಥ್ಯ ಟ್ರೋಫಿ’ ರಾಜ್ಯಮಟ್ಟದ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿದೆ.

ಬ್ರಹ್ಮಾವರ ಎಸ್‌ಎಂಎಸ್ ಕ್ರೀಡಾಂಗಣದಲ್ಲಿ ಜ.24ರಿಂದ 26ರವರೆಗೆ ನಡೆಯುವ ಈ ಪಂದ್ಯಾಟದ ಪೋಸ್ಟರನ್ನು ಕುಂದ ಗನ್ನಡದ ಸಾಂಸ್ಕೃತಿಕ ರಾಯಭಾರಿ ಮನು ಹಂದಾಡಿ ಉಡುಪಿ ಪತ್ರಿಕಾ ಭವನದಲ್ಲಿ ಸೋಮವಾರ ಬಿಡುಗಡೆಗೊಳಿಸಿದರು.

ಆರೋಗ್ಯ ಇಲಾಖೆ ಕ್ಷಯ ರೋಗ ವಿಭಾಗದ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಲಂದೂರು ಮಂಜುನಾಥ್ ಮಾತನಾಡಿ, ಪಂದ್ಯಾಟದಲ್ಲಿ ರಾಜ್ಯದ ಒಟ್ಟು 18 ತಂಡಗಳು ಭಾಗವಹಿಸಲಿವೆ. ಈ ಸಂದರ್ಭದಲ್ಲಿ ಜಿಲ್ಲೆಯ ನೂರು ಕ್ಷಯ ರೋಗಿಗಳಿಗೆ ದಾನಿಗಳ ನೆರವಿನಿಂದ ಪೌಷ್ಠಿಕ ಆಹಾರದ ಕಿಟ್ ವಿತರಿಸ ಲಾಗುವುದು. ಅದೇ ರೀತಿ ಕ್ಷಯ ರೋಗ ತಪಸಾಣಾ ಶಿಬಿರವನ್ನು ಹಮ್ಮಿಕೊಳ್ಳ ಲಾಗುತ್ತದೆ. ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಸ್ಕ್ರೀನಿಂಗ್ ಚಟುವಟಿಕೆ ನಡೆಸಲಾಗುವುದು. ತಂಬಾಕು ವ್ಯಸನಿಗಳಿಗೆ ಆಪ್ತ ಸಮಾಲೋಚನೆ ಮತ್ತು ಚಿಕಿತ್ಸೆ ನೀಡಲಾಗುವುದು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಐ.ಪಿ.ಗಡಾದ್ ಮಾತನಾಡಿ, ಯಾರಿಗಾದರೂ ಎರಡು ವಾರಗಳಿಂತ ಹೆಚ್ಚು ಕಾಲ ಕೆಮ್ಮು, ಕಫ ಇದ್ದರೆ ಕೂಡಲೇ ತಪಾಸಣೆ ಮಾಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ಇದರಿಂದ ದೇಶದಲ್ಲಿ ಕ್ಷಯ ರೋಗವನ್ನು ಹತೋಟಿಗೆ ತರಲು ಸಾಧ್ಯವಾಗುತ್ತದೆ ಜಿಲ್ಲೆಯ ಗ್ರಾಪಂಗಳು ಕ್ಷಯ ಮುಕ್ತ ಅಭಿಯಾನ ನಡೆಸಿದ್ದು, ಈಗಾಗಲೇ 8-10 ಗ್ರಾಪಂಗಳು ಕ್ಷಯ ಮುಕ್ತ ಗ್ರಾಪಂ ಎಂಬ ಘೋಷಣೆ ಮಾಡಿದೆ. ಮುಂದೆ ಜಿಲ್ಲೆಯನ್ನು ಕೂಡ ಕ್ಷಯ ಮುಕ್ತ ಮಾಡಬೇಕಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕ್ಷಯ ರೋಗ ನಿರ್ಮೂಲನ ಅಧಿಕಾರಿ ಡಾ.ಚಿದಾನಂದ ಸಂಜು, ಆರೋಗ್ಯ ಇಲಾಖಾಧಿಕಾರಿ ಡಾ.ಪ್ರಶಾಂತ್ ಭಟ್, ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News