ಜ.26ರಂದು 27 ನಿವೃತ್ತ ಶಿಕ್ಷಕರಿಗೆ ಗುರುವಂದನೆ

Update: 2025-01-13 12:09 GMT

ಉಡುಪಿ, ಜ.13: ಗುಂಡಿಬೈಲು ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿಗಳ ಗುರುವಂದನಾ ಸಮಿತಿಯ ವತಿಯಿಂದ ಗುರುವಂದನಾ ಕಾರ್ಯಕ್ರಮವನ್ನು ಜ.26ರಂದು ದೊಡ್ಡಣಗುಡ್ಡೆಯ ಸರಕಾರಿ ಆಟದ ಮೈದಾನದಲ್ಲಿ ಆಯೋಜಿಸಲಾಗಿದೆ.

ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಕಾರ್ಯದರ್ಶಿ ನವೀನ್ ರಾವ್ ಮಾತನಾಡಿ, ಸಂಜೆ 6ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಈ ಶಾಲೆಯಲ್ಲಿ 1965ರಿಂದ 2024ರವರೆಗೆ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ 27 ಮಂದಿಗೆ ಗುರುವಂದನೆ ನಡೆಯಲಿದೆ ಎಂದು ತಿಳಿಸಿದರು.

ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಆರ್ಶೀವಚನ ನೀಡಲಿರುವರು. ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಪ್ರಸಾದ್ ರಾಜ್ ಕಾಂಚನ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಸಂಜೆ 8 ರಿಂದ 9 ರವರೆಗೆ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 9 ರಿಂದ ಉಡುಪಿಯ ಶ್ರೀಕೃಷ್ಣ ಕಲಾವಿದರಿಂದ ತುಳು ನಾಟಕ ಆನಿದ ಮನದಾನಿ ಪ್ರದರ್ಶನಗೊಳ್ಳಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಸಂತೋಷ್ ಪಾಲನ್, ಕೋಶಾಧಿಕಾರಿ ಗುರುಪ್ರಸಾದ್ ಶರ್ಮ, ಗೌರವಾಧ್ಯಕ್ಷ ಸಂಶುದ್ದೀನ್, ಪ್ರಮುಖರಾದ ಮುಹಮ್ಮದ್ ಶೆಹರಾಝ್, ಮಮತಾ, ಸೈಫುಲ್ಲಾ, ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News