ಅ.3ರಿಂದ ‘ಉಡುಪಿ ಉಚ್ಚಿಲ ದಸರಾ’ ಉತ್ಸವ

Update: 2024-09-25 14:52 GMT

ಉಡುಪಿ, ಸೆ.25: ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಕ್ತಾಭಿಮಾನಿಗಳ ಸಹಯೋಗದೊಂದಿಗೆ ಮೂರನೇ ಬಾರಿಯ ಉಡುಪಿ ಉಚ್ಚಿಲ ದಸರಾ-2024ನ್ನು ಅ.3ರಂದು ಅ.12ರವರೆಗೆ ಹಮ್ಮಿಕೊ ಳ್ಳಲಾಗಿದೆ ಎಂದು ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಗೌರವ ಸಲಹೆಗಾರ ಜಿ.ಶಂಕರ್ ತಿಳಿಸಿದ್ದಾರೆ.

ಉಚ್ಚಿಲ ದೇವಸ್ಥಾನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾವನ್ನು ಶಾಸ್ರೋಕ್ತವಾಗಿ, ಸಾಂಪ್ರದಾ ಯಿಕವಾಗಿ ಹಾಗೂ ಶಿಸ್ತುಬದ್ಧ ವಾಗಿ ಆಚರಿಸಲು ಸಂಕಲ್ಪ ಮಾಡಲಾಗಿದೆ. ಈ ಬಾರಿ ಚುನಾವಣಾ ನೀತಿ ಸಂಹಿತೆ ಜಾರಿಯ ಲ್ಲಿರುವುದರಿಂದ ಪೂರ್ವನಿಗದಿಯಾದ ಈ ಕಾರ್ಯಕ್ರಮ ವನ್ನು ನೀತಿಸಂಹಿತೆ ಉಲ್ಲಂಘನೆಯಾಗದ ರೀತಿಯಲ್ಲಿ ನಡೆಸಲಾಗುವುದು ಎಂದರು.

ಅ.2ರಂದು ಸಂಜೆ 6.30ಕ್ಕೆ ಪಡುಬಿದ್ರಿಯಿಂದ ಕಾಪು ಸಮುದ್ರತೀರದ ದೀಪಸ್ತಂಭದವರೆಗಿನ ವಿದ್ಯುದ್ದೀಪಾಲಂಕಾರದ ಉದ್ಘಾಟನೆ, ಅ.3ರಂದು ಬೆಳಗ್ಗೆ 10ಗಂಟೆಗೆ ದಸರಾ ಉತ್ಸವದ ಉದ್ಘಾಟನೆ ನಡೆಯಲಿದೆ. ಬೆಳಗ್ಗೆ 10.30ಕ್ಕೆ ವಿವಿಧ ಮೇಳ, ಮಾಹಿತಿ ಶಿಬಿರ ಹಾಗೂ ವಸ್ತು ಪ್ರದರ್ಶನವನ್ನು ಉದ್ಘಾಟಿಸ ಲಾಗುವುದು. ಬೆಳಗ್ಗೆ 10.45ಕ್ಕೆ ದ.ಕ. ಮೊಗವೀರ ಮಹಾಜನ ಸಂಘದ 100ನೇ ವರ್ಷದ ಸವಿನೆನಪಿಗೆ ನವೀಕರಿಸಲ್ಪಟ್ಟ ನೂತನ ಆಡಳಿತ ಕಛೇರಿಯ ಉದ್ಘಾಟನೆ ಜರಗಲಿದೆ ಎಂದು ಅವರು ತಿಳಿಸಿದರು.

ಅ.3ರಿಂದ 12ರವರೆಗೆ ದಸರಾ ಪ್ರಯುಕ್ತ ಪ್ರತಿ ದಿನ ನಡೆಯುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಶ್ರೀ ಕ್ಷೇತ್ರದ ಮಹತ್ವದ ಬಗ್ಗೆ ವಿಶೇಷ ಲೇಸರ್ ಶೋ ಜರಗಲಿವೆ. ದಸರಾ ಪ್ರಯುಕ್ತ ನೃತ್ಯ, ಮಕ್ಕಳಿಗಾಗಿ ಶ್ರೀಶಾರದಾ ಮಾತೆಯ ಛದ್ಮವೇಷ, ಹೆಣ್ಣುಮಕ್ಕಳ ಹುಕುಣಿತ, ಚಿತ್ರಕಲಾ, ರಂಗೋಲಿ, ಕುಸ್ತಿ, ದೇಹದಾಡ್ಯ ಸ್ಪರ್ಧೆಗಳು ನಡೆಯಲಿವೆ.

ಅ.12ರಂದು ಅಪರಾಹ್ನ 3ಗಂಟೆಗೆ ಶ್ರೀಕ್ಷೇತ್ರದಿಂದ ಶೋಭಾಯಾತ್ರೆಯು ರಾಷ್ಟ್ರೀಯ ಹೆದ್ದಾರಿ-66 ಮೂಲಕ ಹೊರಟು ಎರ್ಮಾಳ್- ಉಚ್ಚಿಲ- ಮೂಳೂರು -ಕಾಪು ಬೀಚ್(ದೀಪಸ್ತಂಭ) ತಲುಪಲಿದೆ. ಈ ಸಂದರ್ಭದಲ್ಲಿ ಕಾಪು ದೀಪಸ್ತಂಭದ ಬಳಿ ಬೋಟುಗಳಿಂದ ಸಮುದ್ರ ಮಧ್ಯೆ ವಿದ್ಯುದ್ದೀಪಾ ಲಂಕಾರ, ಲೇಸರ್ ಶೋ, ಆಕರ್ಷಕ ಸುಡುಮದ್ದು ಪ್ರದರ್ಶನ, ಸುಮಂಗಲೆಯರಿಂದ ಸಾಮೂಹಿಕ ಮಂಗಳಾರತಿ, ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ, ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ್ ಎಸ್.ಸುವರ್ಣ, ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮೋಹನ್ ಬಂಗೇರ, ರತ್ನಾಕರ ಸಾಲ್ಯಾನ್, ಸುಜೀತ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News