ಸರಿಯಾದ ಯೋಚನೆ ಯೋಜನೆಯಿಂದ ಕೃಷಿಯಲ್ಲಿ ಲಾಭ: ಶರ್ಮ

Update: 2024-09-25 16:45 GMT

ಉಡುಪಿ, ಸೆ.25: ಸರಿಯಾದ ಯೋಚನೆ ಮತ್ತು ಯೋಜನೆಯಿಂದ ಕೃಷಿಯಲ್ಲಿ ವಿಫುಲ ಲಾಭ ಗಳಿಸುವುದು ಸಾಧ್ಯವಿದೆ ಎಂದು ಪ್ರಗತಿಪರ ಕೃಷಿಕ, ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ 80ನೇ ಬಡಗುಬೆಟ್ಟು ಗ್ರಾಮದ ಬಜಿಮಜಲು ಉಮೇಶ್ ನಾಯಕ್ ಅವರ ಕೃಷಿಕ್ಷೇತ್ರದಲ್ಲಿ ನಡೆದ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ನಮ್ಮಲ್ಲಿ ಪ್ರತಿಶತ 90ರಷ್ಟು ರೈತರು ಸರಿಯಾದ ಮಾಹಿತಿ ಇಲ್ಲದೇ, ತಪ್ಪು ಮಾಹಿತಿದಾರರ ಸಲಹೆ ಪಡೆದು, ತಪ್ಪುಪದ್ದತಿ ಯಲ್ಲಿ ಕೃಷಿ ಮಾಡಿ ಮಾಡಿ ನಷ್ಟ ಅನುಭವಿಸುತಿದ್ದಾರೆ. ಲಾಭ ಪಡೆಯುತ್ತಿರುವ ರೈತರ ಸಲಹೆ ಪಡೆದು, ಅವರ ಕೃಷಿ ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರತ್ಯಕ್ಷ ನೋಡಿ ಕೃಷಿ ಮಾಡಿದರೇ ಖಂಡಿತ ಲಾಭ ಸಾಧ್ಯವಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರಾಷ್ಟ್ರೀಯ ಕೃಷಿ ಪಂಡಿತ ಪುರಸ್ಕೃತ ಕುದಿ ಶ್ರೀನಿವಾಸ ಭಟ್ ಮಾತನಾಡಿ, ಮಕ್ಕಳನ್ನು ತೋಟ, ಗದ್ದೆ, ದನಗಳ ಹಟ್ಟಿಗೆ ಕರೆದುಕೊಂಡು ಹೋಗಿ, ಅವರನ್ನೂ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು. ಕೃಷಿ ಉಳಿದರೇ ಕೃಷಿಕ ಉಳಿಯುತ್ತಾನೆ. ಕೃಷಿಕ ಉಳಿದರೇ ನಾವೆಲ್ಲಾ ಉಳಿಯಲು ಸಾಧ್ಯ. ಮದ್ಯವರ್ತಿಗಳನ್ನು ದೂರವಿಟ್ಟು ನೇರ ಮಾರುಕಟ್ಟೆಯಲ್ಲಿ ವ್ಯವಹಾರ ಮಾಡಿ, ಹೆಚ್ಚು ಲಾಭ ಸಿಗುತ್ತದೆ ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಗುರುನಂದ ನಾಯಕ್ ಮಲ್ಲನಜಡ್ಡು ಉದ್ಘಾಟಿಸಿದರು. ಸ್ಥಳೀಯ ಕೃಷಿಕರಾದ ನಾರಾಯಣ ಶೆಟ್ಟಿ ಬಾಳ್ಕಟ್ಟ, ಸತ್ಯ ನಾರಾಯಣ ಪ್ರಭು ವೇದಿಕೆಯಲ್ಲಿದ್ದರು. ಉದಯ ನಾಯಕ್ ಸಾಗು ಅಧ್ಯಕ್ಷತೆ ವಹಿಸಿದ್ದರು. ಮಧುಸೂಧನ ನಾಯಕ್ ಸ್ವಾಗತಿಸಿದರು. ದಿನೇಶ್ ಪ್ರಭು ಕಾರ್ಯಕ್ರಮ ಸಂಯೋಜಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News