ಶೇ.60 ಕನ್ನಡ ನಾಮಫಲಕ ಕಡ್ಡಾಯ: ಕರವೇಯಿಂದ ಡಿಸಿಗೆ ಮನವಿ

Update: 2024-10-14 16:28 GMT

ಉಡುಪಿ, ಅ.14: ಅಂಗಡಿ, ಮುಗ್ಗಟ್ಟುಗಳ ನಾಮಫಲಕಗಳು ಶೇ.60ರಷ್ಟು ವಿಳಾಸ ಸಮೇತ ಕನ್ನಡದಲ್ಲಿರುವಂತೆ ಕ್ರಮ ಜರಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಉಡುಪಿ ಜಿಲ್ಲೆಯಾದ್ಯಂತ ಜಾಹಿರಾತು ಫಲಕಗಳು, ಶಿಕ್ಷಣ ಸಂಸ್ಥೆಗಳ ಫಲಕಗಳು, ವಾಣಿಜ್ಯ ಮಳಿಗೆಗಳು, ಆಸ್ಪತ್ರೆಯ ಜಾಹಿರಾತು ಫಲಕಗಳು ಸೇರಿದಂತೆ ಎಲ್ಲಾ ಕಡೆ ಸರಕಾರದ ನಿಯಮದ ನಾಮಫಲಕಗಳನ್ನು ಅಳವಡಿಸಿಕೊಳ್ಳದೇ ಮನಬಂದಂತೆ ಪರಭಾಷೆಯಲ್ಲಿ ನಾಮಫಲಕಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಶೇ.60 ಕನ್ನಡ ಭಾಷೆಯನ್ನು ಕಡ್ಡಾಯ ವಾಗಿ ಅಳವಡಿಸಿಕೊಳ್ಳಬೇಕೆಂದು ರಾಜ್ಯ ಸರಕಾರ ಸುಗ್ರಿವಾಜ್ಞೆ ಹೊರಡಿಸಿ ಹತ್ತು ತಿಂಗಳು ಕಳೆದರೂ ಸಹ ಉಡುಪಿ ಜಿಲ್ಲೆಯಲ್ಲಿ ಸುಗ್ರಿವಾಜ್ಞೆ ಸಮರ್ಪಕವಾಗಿ ಜಾರಿಗೆ ಆಗುತ್ತಿಲ್ಲ ಎಂದು ಮನವಿಯಲ್ಲಿ ದೂರಲಾಗಿದೆ.

ಮುಂದಿನ ನವಂಬರ್ ಒಂದರ ಒಳಗೆ ಅಂದರೆ ಕನ್ನಡ ನಾಡ ಹಬ್ಬದ ರಾಜ್ಯೋತ್ಸವದ ವೇಳೆಗೆ ಎಲ್ಲಾ ವಾಣಿಜ್ಯ ಮಳಿಗೆ, ಅಂಗಡಿ, ಮುಗ್ಗಟ್ಟು ನಾಮ ಫಲಕಗಳು ಸಂಪೂರ್ಣವಾಗಿ ಶೇ.60ರಿಂದ 70 ಭಾಗ ವಿಳಾಸ ಸಮೇತ ಕನ್ನಡದಲ್ಲಿ ಇರಬೇಕು ಎಂದು ಕರವೇ ಗಡುವು ವಿಧಿಸಿದೆ. ಮನವಿಗೆ ಸ್ಪಂದಿಸಿ ಕ್ರಮ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಎಚ್ಚರಿಕೆ ನೀಡಿದೆ.

ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಗೌರವಾಧ್ಯಕ್ಷ ಸುಂದರ ಎ.ಬಂಗೇರ, ಜಿಲ್ಲಾ ಮಹಿಳಾ ಅಧ್ಯಕ್ಷೆ ಗೀತಾ ಪಾಂಗಾಳ, ಮಹಿಳಾ ಉಪಾಧ್ಯಕ್ಷೆ ದೇವಕಿ ಬಾರಕೂರು, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಜ್ಯೋತಿ, ಜಿಲ್ಲಾ ಸಂಘಟನೆ ಕಾರ್ಯದರ್ಶಿ ಗೋಪಾಲ್ ದೊರೆ, ಜಿಲ್ಲಾ ಸಂಸ್ಕೃತ ಕಾರ್ಯದರ್ಶಿ ಕೃಷ್ಣಕುಮಾರ್, ಬ್ರಹ್ಮವರ ತಾಲೂಕು ಅಧ್ಯಕ್ಷ ಸ್ಟ್ಯಾನಿ ಜಾರ್ಜ್ ಡಿಸೋಜ, ಜಿಲ್ಲಾ ಸದಸ್ಯರಾದ ರೇಣುಕಾ, ರಶ್ಮಿ, ಅಶೋಕ. ದೇವರಾಜ್, ರವಿಕುಮಾರ್, ವಿನೋದ್ ಕುಮಾರ್, ಶರಣು ಕುಮಾರ್, ಮೈಬೂಬ್, ರಮೇಶ, ವೈಭವ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News