ಉಡುಪಿಯನ್ನು ಕ್ಷಯಮುಕ್ತ ಜಿಲ್ಲೆಯನ್ನಾಗಿಸಲು ಕ್ರಮ: ಸಚಿವೆ ಶೋಭಾ ಕರಂದ್ಲಾಜೆ

Update: 2023-08-23 16:27 GMT

ಉಡುಪಿ, ಆ.23: ಉಡುಪಿ ನಗರದಲ್ಲಿ 48 ಜನ ಕ್ಷಯರೋಗಿಗಳಿದ್ದು, ಅವರಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ 25 ಜನರಿಗೆ ಆರು ತಿಂಗಳವರೆಗೆ ಆಹಾರದ ಕಿಟ್‌ಅನ್ನು ನೀಡುವ ಮೂಲಕ ಉಡುಪಿ ನಗರವನ್ನು ಕ್ಷಯರೋಗ ಮುಕ್ತ ಮಾಡಲು ಪ್ರಯತ್ನಿಸಲಾಗುವುದು. ಅದೇ ರೀತಿ ಜಿಲ್ಲೆಯನ್ನು ಕ್ಷಯ ಮುಕ್ತವನ್ನಾಗಿಸಲು ಎಲ್ಲಾ ರೀತಿಯ ಅಗತ್ಯ ಮುಂಜಾ ಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ, ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ, ಲಯನ್ಸ್ ಲಿಯೋ ಪರ್ಕಳ ಹಾಗೂ ಅಪ್ಪುಅಭಿಮಾನಿಗಳ ಬಳಗ ಉಡುಪಿ ಇವುಗಳ ಜಂಟಿ ಆಶ್ರಯದಲ್ಲಿ ಅಜ್ಜರಕಾಡು ರೆಡ್‌ಕ್ರಾಸ್ ಭವನದ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಲ್ಪನೆಯಂತೆ ಕ್ಷಯಮುಕ್ತ ಭಾರತದ ಯೋಜನೆಯ ಅಂಗವಾಗಿ ಕ್ಷಯಮುಕ್ತ ಉಡುಪಿ ನಗರ ಮಾಡುವ ನಿಟ್ಟಿನಲ್ಲಿ ಉಡುಪಿ ನಗರದಲ್ಲಿ ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರದ ಕಿಟ್ ವಿತರಣೆ ಹಾಗೂ ಕ್ಷಯರೋಗ ಮಾಹಿತಿ ಕಾರ್ಯಾ ಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ವಿಶ್ವಕ್ಕೆ ಹೋಲಿಸಿದ್ದಲ್ಲಿ ಭಾರತ ದೇಶದಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಕ್ಷಯ ರೋಗಿಗಳಿದ್ದು, ಕ್ಷಯರೋಗ ನಿರ್ಮೂಲನೆ ಮಾಡಲು ಕೇಂದ್ರ ಸರಕಾರವು ಉಚಿತ ಚಿಕಿತ್ಸೆ ನೀಡುತ್ತಿದೆ. ಭಾರತ ದೇಶವನ್ನು ಕ್ಷಯರೋಗ ಮುಕ್ತ ಮಾಡಲು ಪೂರಕ ವಾದ ಕೆಲಸವಾಗಬೇಕು. ಕೇಂದ್ರ ಸರಕಾರ ಕ್ಷಯರೋಗಿಗಳನ್ನು ಗುರುತಿಸಿ ಉಚಿತವಾಗಿ ಔಷಧಿಗಳನ್ನು ನೀಡುತ್ತಿದೆ ಎಂದರು.

ಎಲ್ಲಾ ತರಹದ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗೆ ಬೇರೆ ದೇಶಗಳನ್ನು ಅವಲಂಭಿಸದೇ ನಮ್ಮ ದೇಶದಲ್ಲಿಯೇ ಆರೋಗ್ಯ ವ್ಯವಸ್ಥೆಯಲ್ಲಿ ಅದರಲ್ಲೂ ಮೂಲಭೂತ ಸೌಕರ್ಯದಲ್ಲಿ ಸುಧಾರಣೆ ಆಗಬೇಕು. ಇದರೊಂದಿಗೆ ತಜ್ಞ ವೈದ್ಯರುಗಳ ಸಂಖ್ಯೆ ಹೆಚ್ಚಾಗಬೇಕು ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ಶಾಸಕ ಯಶ್‌ಪಾಲ್ ಸುವರ್ಣ ವಹಿಸಿದ್ದರು. ಈ ಸಂದರ್ಭ ದಲ್ಲಿ ಕ್ಷಯಮುಕ್ತ ಭಿತ್ತಿಪತ್ರವನ್ನು ಬಿಡುಗಡೆ ಗೊಳಿಸಲಾಯಿತು ಹಾಗೂ ಫಲಾನುಭವಿಗಳಿಗೆ ಆಹಾರದ ಕಿಟ್ ಅನ್ನು ವಿತರಿಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ನಗರಸಭಾ ಸದಸ್ಯರಾದ ಟಿ.ಜಿ.ಹೆಗಡೆ, ಪ್ರಭಾಕರ ಪೂಜಾರಿ, ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶೋಕ್ ಶೆಟ್ಟಿಗಾರ್, ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ಪರ್ಕಳ ಲಯನ್ಸ್ ಲಿಯೋ ಕ್ಲಬ್‌ನ ಸ್ವಪ್ನ ಸುರೇಶ್ ಮೊದಲಾದವರು ಉಪಸ್ಥಿತರಿ ದ್ದರು. ನಗರಸಭಾ ಸದಸ್ಯ ವಿಜಯ್ ಕೊಡವೂರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News