ಆಗುಂಬೆ ಅನೈತಿಕ ಪೊಲೀಸ್‌ಗಿರಿ ಪ್ರಕರಣ; ಆರೋಪಿಗಳ ಪತ್ತೆಗೆ ಕ್ರಮ: ಎಸ್ಪಿ ಡಾ.ಅರುಣ್

Update: 2023-09-22 15:28 GMT

ಎಸ್ಪಿ ಡಾ.ಅರುಣ್

ಉಡುಪಿ, ಸೆ.22: ಒಂದು ತಿಂಗಳ ಹಿಂದೆ ಆಗುಂಬೆ ಸಮೀಪ ಬೈಕ್ ತಡೆದು ಜೋಡಿಯನ್ನು ಪ್ರಶ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಕಾಪು ಎಸ್ಸೈ ನೇತೃತ್ವದ ತಂಡ ಇಂದು ಸ್ಥಳಕ್ಕೆ ತೆರಳಿ ಆರೋಪಿಗಳ ಪತ್ತೆ ಹಾಗೂ ಸ್ಥಳ ಮಹಜರು ಕಾರ್ಯ ನಡೆಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಯಾರನ್ನು ಕೂಡ ಬಂಧಿಸಿಲ್ಲ. ಪ್ರಕರಣದ ತನಿಖೆಯನ್ನು ಮುಂದುವರೆಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.

ಉಡುಪಿ ಎಸ್ಪಿ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸೈಬರ್ ಕ್ರೈಮ್ ಸಂಬಂಧ ಹಲವು ದೂರುಗಳು ಬಂದಿವೆ. ಆದುದರಿಂದ ಈ ಜಿಲ್ಲೆಯ ಸಾರ್ವಜನಿಕರು ಬಹಳ ಎಚ್ಚರಿಕೆಯಿಂದ ಇರಬೇಕು. ಶೇ.99ರಷ್ಟು ಆನ್‌ಲೈನ್ ವಂಚನೆ ಪ್ರಕರಣಗಳಲ್ಲಿ ವಂಚನೆಗೆ ಒಳಗಾಗುವವರೇ ಸ್ವಯಂ ಆಗಿ ಅಪರಿಚಿತ ಖಾತೆಗೆ ಹಣ ಹಾಕಿ ಮೋಸಕ್ಕೆ ಒಳಗಾಗುತ್ತಿದ್ದಾರೆ. ವಂಚನೆಗೆ ಒಳಗಾದ ಕೂಡಲೇ 1930ಗೆ ಕರೆ ಮಾಡಿದರೆ ತಮ್ಮ ಹಣವನ್ನು ವಾಪಾಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದರು.

ಅಕ್ರಮ ಮರಳುಗಾರಿಕೆ, ಕಲ್ಲು ಸಾಗಾಟ ವಾಹನಗಳ ವಿರುದ್ಧ ಕ್ರಮ ತೆಗೆದು ಕೊಳ್ಳುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ, ಕಾನೂನು ಪಾಲನೆ ಮಾಡುವುದು ಪೊಲೀಸರ ಕರ್ತವ್ಯ. ಅದರಂತೆ ನಾವು ಕೆಲಸ ಮಾಡುತ್ತಿದ್ದೇವೆ. ಎಲ್ಲರು ಕಾನೂನು ನೆಲೆಯಲ್ಲಿ ಸಾಗಿ ತಮ್ಮ ಬದುಕು ಕಟ್ಟಿಕೊಳ್ಳಬೇಕು. ಮನೆ ಕಟ್ಟಲು ಬೇಕಾದ ಸಾಮಗ್ರಿಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡುವುದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗಳ ಕರ್ತವ್ಯವಾಗಿದೆ. ಈ ಪರ್ಯಾಯ ವ್ಯವಸ್ಥೆಗೆ ಜನರು ಕೂಡ ತಮ್ಮ ಮನಸ್ಥಿತಿಯನ್ನು ಬದಲಾಯಿಸಿ ಕೊಳ್ಳಬೇಕು. ಕಟ್ಟಡ ನಿರ್ಮಾಣಕ್ಕೆ ಉಡುಪಿಯಲ್ಲೂ ಬೆಂಗಳೂರಿನಂತೆ ಎಂ ಸ್ಯಾಂಡ್ ಹಾಗೂ ಕಲ್ಲುಗಳನ್ನು ಬಳಸಬೇಕು. ಕಾನೂನಿನ ಪ್ರಕಾರ ನಡೆದುಕೊಳ್ಳುವ ಯಾರಿಗೂ ನಾವು ತೊಂದರೆ ಕೊಡುವುದಿಲ್ಲ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News