ಕೊರಗರಿಗೆ ಕೃಷಿ ಭೂಮಿಗಾಗಿ ಅಹೋರಾತ್ರಿ ಧರಣಿ ಸತ್ಯಾಗ್ರಹ
ಉಡುಪಿ, ಸೆ.20: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ ಕೇರಳ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಕೊರಗ ಸಮುದಾಯ ಕುಟುಂಬಗಳಿಗೆ ಕೃಷಿ ಭೂಮಿ ನೀಡುವಂತೆ ಆಗ್ರಹಿಸಿ ಅಹೋರಾತ್ರಿ ನಿರಂತರ ಧರಣಿ ಸತ್ಯಾಗ್ರಹವನ್ನು ಬುಧವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾಗಿದೆ.
ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ ಮಾತನಾಡಿ, ಕೊರಗ ಸಮುದಾಯದ ಬಗ್ಗೆ ವಿಶೇಷ ಅಧ್ಯಯನ ಮಾಡಿರುವ ಡಾ.ಮುಹಮ್ಮದ್ ಪೀರ್ ವರದಿ ಯಲ್ಲಿಯೂ ಕೊರಗರ ಅಭಿವೃದ್ಧಿಗೆ ಪ್ರತಿಯೊಂದು ಕುಟುಂಬಕ್ಕೂ 2.5 ಎಕರೆ ಭೂಮಿ ನೀಡಬೇಕು ಎಂದು ಶಿಫಾರಸ್ಸು ಮಾಡಿದೆ. ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಸುಮಾರು 200 ಕುಟುಂಬಗಳಿಗೆ ಒಂದು ಎಕರೆ ಜಾಗವನ್ನು ನೀಡಿದ್ದು, ಇನ್ನೂ ಅಂದಾಜು 2000 ಕುಟುಂಬಗಳು ಭೂಮಿ ಪಡೆಯಲು ಬಾಕಿ ಇದೆ ಎಂದು ತಿಳಿಸಿದರು.
ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕಿನ ಕೊರಗ ಹಾಡಿಯಲ್ಲಿ ಸಂಘಟನೆಯ ವಿಶೇಷ ಸಭೆಗಳನ್ನು ನಡೆಸಿ ಭೂ ರಹಿತರಿಂದ ಸುಮಾರು 800 ಅರ್ಜಿಗಳನ್ನು ಸಂಗ್ರಹಿಸಿ ಸಾಮೂಹಿಕವಾಗಿ ತಹಶೀಲ್ದಾರುಗಳಿಗೆ ಸಲ್ಲಿಸಿದ್ದೇವೆ. ಆದರೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ಭೂಮಿಯ ಬೇಡಿಕೆಗೆ ಯಾವುದೇ ಸ್ಪಂದನೆ ದೊರಕಿಲ್ಲ. ಭೂಮಿ ಗುರುತಿಸಿ ಹಕ್ಕು ಪತ್ರ ನೀಡುವ ಕಾರ್ಯ ಇನ್ನೂ ಮಾಡಿಲ್ಲ ಎಂದು ಅವರು ಆರೋಪಿಸಿದರು.
ಧರಣಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿನಯ ಅಡ್ವೆ, ಮುಖಂಡ ರಾದ ಪುತ್ರನ್ ಹೆಬ್ರಿ, ಬೊಗ್ರ ಕೊರಗ, ಗಿರಿಜಾ ಜನ್ನಾಡಿ, ದಿವಾಕರ ಕಳತ್ತೂರು, ಸುಶೀಲಾ ಕೆಂಜೂರು ಮೊದಲಾದವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಮಣಿಪಾಲ ಸಿಂಡಿಕೇಟ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರ ವಣಿಗೆ ನಡೆಸಲಾಯಿತು.
ಅಹೋರಾತ್ರಿ ಧರಣಿ ಅಂತ್ಯ
ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ನೂರಾರು ಕೊರಗರು ಬೆಳಗ್ಗೆಯಿಂದ ಸಂಜೆಯವರೆಗೆ ಧರಣಿ ನಡೆಸಿದರು. ಮಧ್ಯಾಹ್ನ ಸ್ಥಳದಲ್ಲಿಯೇ ಭೋಜನ ತಯಾರಿಸಿ ಉಂಡರು. ಅದರ ನಂತರವೂ ಅಹೋರಾತ್ರಿ ಧರಣಿ ಯನ್ನು ಮುಂದುವರೆಸಿದರು.
ಸಂಜೆ 7.30ರ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಧರಣಿ ನಿರತರಿಂದ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಈ ಸಂಬಂಧ ಒಂದು ತಿಂಗಳ ಒಳಗೆ ತಹಶೀಲ್ದಾರ್ ಗಳ ಸಭೆ ನಡೆಸಿ ಲಭ್ಯ ಇರುವಲ್ಲಿ ಭೂಮಿ ಕೊಡುವ ಕಾರ್ಯ ಮಾಡಲಾಗು ವುದು ಎಂದು ಭರವಸೆ ನೀಡಿದರು.
ಈ ಹಿನ್ನೆಲೆಯಲ್ಲಿ ಅಹೋರಾತ್ರಿ ಧರಣಿಯನ್ನು ಅಂತ್ಯಗೊಳಿಸಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ಎಸಿ ರಶ್ಮಿ ಹಾಜರಿದ್ದರು.