ಪಡುಬಿದ್ರೆ ಬೀಚ್‌ನಲ್ಲಿ ಮತ್ತೊಂದು ಬೃಹತ್ ಕಡಲಾಮೆ ರಕ್ಷಣೆ

Update: 2023-07-22 14:45 GMT

ಪಡುಬಿದ್ರಿ: ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ ನಿನ್ನೆ ಅಪರೂಪದ ಹಾಕ್ಸ್ ಬಿಲ್ ಕಡಲಾಮೆ ರಕ್ಷಿಸಿದ ಬೆನ್ನಲ್ಲೇ ಇಂದು ಮತ್ತೊಂದು ಬೃಹತ್ ಗಾತ್ರದ ಕಡಲಾಮೆ ರಕ್ಷಿಸಿ ಸಮುದ್ರಕ್ಕೆ ಮರಳಿ ಬಿಡಲಾಗಿದೆ.

ಲೇದರ್ ಬ್ಯಾಕ್ ಎಂಬುದಾಗಿ ಕರೆಯುವ ಕಡಲಾಮೆಯ ವೈಜ್ಞಾನಿಕ ಹೆಸರು ಡರ್ಮೊಚೆಲಿಸಂ ಕೊರಿಯಾಸಿಯಾ. ಇದು ಗೂಡಕಟ್ಟಲು ವಲಸೆ ಹೋಗುವ ಅತಿದೊಡ್ಡ ಕಡಲಾಮೆ ಜಾತಿಗೆ ಸೇರಿದ ಆಮೆ ಆಗಿದೆ. ಈ ಜಾತಿಯ ಕಡಲಾಮೆ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಜಾಗತಿಕವಾಗಿ ಇದನ್ನು ಕ್ಷೀಣಿಸುತ್ತಿರುವ ಪಟ್ಟಿಗೆ ಸೇರಿಸಲಾಗಿದೆ.

ಶನಿವಾರ ಬೀಚ್ ಬಳಿ ಸಮುದ್ರ ತೀರದಲ್ಲಿ ನೆಗರ್ ಬಲೆ ಮೂಲಕ ಮೀನು ಹಿಡಿಯುತ್ತಿದ್ದ ದಿನರಾಜ್ ಎಂಬವರಿಗೆ ತೀರಾ ಬಳಲಿದ ಸ್ಥಿತಿಯಲ್ಲಿದ್ದ ಕಡಲಾಮೆ ಕಂಡುಬಂದಿತ್ತು. ಇವರು ತಕ್ಷಣ ಬ್ಲೂ ಫ್ಲ್ಯಾಗ್ ಬೀಚ್ ಮೇಲ್ವಿಚಾರಕ ಕಿರಣ್‌ರಾಜ್ ಕರ್ಕೇರರವರಿಗೆ ಮಾಹಿತಿ ನೀಡಿದರು.

ತಕ್ಷಣ ಸಿಬ್ಬಂದಿಗಳಾದ ಚಿರಾಕ್, ಸಂದೇಶ್, ಗೌತಮ್ ಜತೆಗೂಡಿ ಕಡಲಾಮೆಯನ್ನು ಸಮುದ್ರದಿಂದ ಮೇಲಕ್ಕೆತ್ತಿದ್ದರು. ಈ ಸಂದರ್ಭ ಪರಿಶೀಲಿಸಿ ದಾಗ ಈ ಕಡಲಾಮೆ ಮೊಟ್ಟೆ ಇಡಲು ಸಮುದ್ರ ತೀರಕ್ಕೆ ಬಂದಿದ್ದು, ಅಬ್ಬರದ ಅಲೆಗಳ ಹೊಡೆತಕ್ಕೆ ಸಿಲುಕಿ ಬಳಲಿತ್ತೆನ್ನಲಾಗಿದೆ. ಇದರಿಂದ ಇದರ ಕಾಲಿನಲ್ಲಿ ಗಾಯಗಳಿವೆ.

ಪ್ರಥಮ ಚಿಕಿತ್ಸೆ ನೀಡಿ ಉಪಚರಿಸಿದ ಬಳಿಕ ಈ ಕಡಲಾಮೆಯನ್ನು ಮರಳಿ ಸಮುದ್ರಕ್ಕೆ ಬಿಡಲು ಸಮೀಪದ ಕಾಮಿನಿ ಹೊಳೆಯಲ್ಲಿ ಬಿಡಲಾಯಿತು. ಸ್ವಲ್ಪ ಹೊತ್ತಿನ ಬಳಿಕ ಈ ಕಡಲಾಮೆ ಹೊಳೆ ಮೂಲಕ ಸುರಕ್ಷಿತವಾಗಿ ಸಮುದ್ರ ಸೇರಿದೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News