ಮಣಿಪುರದಲ್ಲಿ ಬಿಜೆಪಿ ಒಡೆದು ಆಳುವ ನೀತಿಯಿಂದ ಪ್ರಜಾಪ್ರಭುತ್ವಕ್ಕೆ ಸೋಲು: ಸುಧೀರ್ ಮುರೋಳಿ
ಉಡುಪಿ, ಜು.29: ಮಣಿಪುರದಲ್ಲಿ ಬಹುಸಂಖ್ಯಾತ ಸಮುದಾಯವನ್ನು ಓಲೈಸುತ್ತ ಒಡೆದು ಆಳುವ ನೀತಿಯಿಂದ ಬಿಜೆಪಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದು. ಆದರೆ ಇದರಿಂದ ಸಂಭವಿಸುವ ಗಲಭೆ, ಹಿಂಸಾಚಾರ ದಿಂದ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಮಾನವೀಯತೆಗೆ ಸೋಲು ಆಗುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರ ಸುಧೀರ್ ಕುಮಾರ್ ಮುರೋಳಿ ಆರೋಪಿಸಿದ್ದಾರೆ.
ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿ ರುವ ದೌರ್ಜನ್ಯವನ್ನು ಖಂಡಿಸಿ ಹಾಗೂ ಮಪುರ ಮತ್ತು ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ, ಜಿಲ್ಲಾ ಯುವ ಕಾಂಗ್ರೆಸ್ ಹಾಗೂ ಜಿಲ್ಲಾ ಎನ್‌ಎಸ್‌ಯುಐ ನೇತೃತ್ವದಲ್ಲಿ ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಶನಿವಾರ ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಯಶ್‌ಪಾಲ್, ಶೋಭಾ ಸೇರಿದಂತೆ ಬಿಜೆಪಿಯವರ ರಕ್ತದಲ್ಲಿ ಇರುವುದು ಕೇವಲ ಧ್ವೇಷ ಮಾತ್ರ. ಇವರೆಲ್ಲರದ್ದು ಮನುಷ್ಯ ವಿರೋಧಿ ನೀತಿಗಳು. ಸಾವನ್ನು ನೋಡಿ ಸಂಭ್ರಮಿಸುವವರು ಎಂದಿಗೂ ಮನುಷ್ಯರಾಗಲು ಸಾಧ್ಯವಿಲ್ಲ. ಮಣಿಪುರದಲ್ಲಿ ನಡೆದ ಬೆತ್ತಲೆ ಪ್ರಕರಣ ಕೇವಲ ಸಮುದಾಯದ ಮೇಲೆ ನಡೆದಿರುವುದಲ್ಲ. ಇದು ತಾಯಿ ಭಾರತ ಮಾತೆಯ ಮೇಲೆ ನಡೆದ ದೌರ್ಜನ್ಯ ಎಂಬುದು ಬಿಜೆಪಿಯವರಿಗೆ ಅರಿವು ಇರಲಿ ಎಂದರು.
ಯಶ್‌ಪಾಲ್ ಸುವರ್ಣ ಚುನಾವಣೆಯಲ್ಲಿ ಗೆದ್ದ ಕೂಡಲೇ ಅವರಿಗೆ ವ್ಯಕ್ತಿತ್ವದ ಪ್ರಮಾಣಪತ್ರ ಕೊಡಬೇಕಾಗಿಲ್ಲ. ಸುಸಂಸ್ಕೃತರ, ವಿದ್ಯಾವಂತರ ಜಿಲ್ಲೆಗೆ ಯಶ್ ಪಾಲ್ ಸುವರ್ಣ ಅವರಂತಹ ಅವಿದ್ಯಾವಂತ, ಅವಿವೇಕಿ ಹಾಗೂ ಧರ್ಮ ರಕ್ಷಣೆ ಹೆಸರಿನಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವನ್ನು ವೈಭವಿಕರಿ ಸುವ ಶಾಸಕರು ಆಯ್ಕೆಯಾಗಿರುವುದು ಉಡುಪಿಗೆ ಶೋಭೆ ತರಲ್ಲ ಎಂದು ಅವರು ಟೀಕಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಹೆಬ್ಬಾರ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ವರೋನಿಕಾ ಕರ್ನೆಲಿಯೋ, ಹರೀಶ್ ಕಿಣಿ, ಪ್ರಖ್ಯಾತ್ ಶೆಟ್ಟಿ, ಲಕ್ಷ್ಮಣ್ ಶೆಣೈ, ಎನ್‌ಎಸ್ ಯುಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್, ದಿವಾಕರ್ ಕುಂದರ್, ಗಣೇಶ್ ನೆರ್ಗಿ, ಮಮತಾ ಶೆಟ್ಟಿ, ಯತೀಶ್ ಕರ್ಕೇರ, ಭಾಸ್ಕರ ರಾವ್ ಕಿದಿಯೂರು, ರೆನಾಲ್ಡ್ ಪ್ರವೀಣ್ ಕುಮಾರ್, ಮೀನಾಕ್ಷಿ ಮಾಧವ ಬನ್ನಂಜೆ ಮೊದಲಾದವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನಾ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಿಂದ ಅಜ್ಜರಕಾಡಿನವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಯಶ್‌ಪಾಲ್ ವಿರುದ್ಧ ಆಕ್ರೋಶ
‘ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಆಡಳಿತ ಮಂಡಳಿ, ಪೊಲೀಸ್ ಇಲಾಖೆ ಹಾಗೂ ನರೇಂದ್ರ ಮೋದಿ ಕಳುಹಿಸಿರುವ ಆಯೋಗದ ಸದಸ್ಯೆ ಖುಷ್ಬೂ ವಿಚಾರಣೆ ನಡೆಸಿದ್ದಾರೆ. ನಿಮಗೆ ಯಾರ ಬಗ್ಗೆ ಕೂಡ ನಂಬಿಕೆ ಇಲ್ಲದಿದ್ದರೆ ಇನ್ನು ಮುಂದೆ ನಕಲಿ ಹಿಂದುತ್ವವಾದಿ ಕಲ್ಲಡ್ಕ ಪ್ರಭಾಕರ ಭಟ್ ಅವರಿಂದ ಬೇಕಾದರೆ ತನಿಖೆ ಮಾಡಿಸಿ ನಮ್ಮ ಸಂಪೂರ್ಣ ಬೆಂಬಲ ಇದೆ’ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ಕಿಡಿಕಾರಿದರು.
‘ನೀವು ಒಬ್ಬರು ಶಾಸಕರು ಎಂಬುದಾಗಿ ನಿಮ್ಮ ತಲೆಯಲ್ಲಿ ಇರಲಿ. ನಿಮ್ಮ ಕ್ಷೇತ್ರದ ಜನತೆ ನಿಮ್ಮನ್ನು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಆರಿಸಿ ಕಳುಹಿಸಿದ್ದಾರೆ. ಅದು ಬಿಟ್ಟು ನೀವು ಬೇಕಾಬಿಟ್ಟಿಯಾಗಿ ನಿಮ್ಮ ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸಲು ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟ ಆಡಬೇಡಿ. ನಿಮ್ಮಿಂದ ಹಾಗೂ ಶೋಭಾ ಕರಂದ್ಲಾಜೆಯಿಂದ ಮಲ್ಪೆ ಬಂದರು, ಪರ್ಕಳ, ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ, ಇಂದ್ರಾಳಿ ಸೇತುವೆ ಸೇರಿದಂತೆ ಅನೇಕ ಕೆಲಸ ಆಗಬೇಕಾಗಿದೆ. ನಿಮಗೆ ತಾಕತ್ತಿದ್ದ, ಧಮ್ಮಿದ್ದರೆ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಿ ಉಡುಪಿ ಜನತೆಗೆ ನ್ಯಾಯ ಒದಗಿಸುವ ಕಾರ್ಯ ಮಾಡಿ’ ಎಂದು ಅವರು ಸವಾಲು ಹಾಕಿದರು.