ಹಿಂದುತ್ವ ಅಧಿಕಾರ ಪಡೆಯುವ ಬಿಜೆಪಿಯ ರಾಜಕೀಯ ಯೋಜನೆ: ಡಾ.ಹೇಮಲತಾ

Update: 2024-08-29 16:31 GMT

ಉಡುಪಿ: ಹಿಂದುತ್ವ ಎಂಬುದು ಹಿಂದು ಧರ್ಮ, ನಂಬಿಕೆ ಅಲ್ಲ. ಅದು ಜನರನ್ನು ವಿಭಜಿಸಿ, ಅಧಿಕಾರ ಪಡೆಯಲು ಮತ್ತು ಬೃಹತ್ ಬಂಡವಾಳ ಶಾಹಿಗಳಿಗೆ ಪ್ರೋತ್ಸಾಹ ನೀಡುವ ಬಿಜೆಪಿಯ ರಾಜಕೀಯ ಯೋಜನೆಯಾಗಿದೆ. ಇದನ್ನು ಜನರಿಗೆ ಅರ್ಥ ಮಾಡಿಸುವ ಕಾರ್ಯ ಅಗತ್ಯವಾಗಿ ಮಾಡಬೇಕಾಗಿದೆ ಎಂದು ಅಖಿಲ ಭಾರತ ಕಟ್ಟಡ ಕಾರ್ಮಿಕರ ಫೆಡರೇಶನ್ ಅಧ್ಯಕ್ಷೆ ಡಾ.ಕೆ.ಹೇಮಲತಾ ಆರೋಪಿಸಿದ್ದಾರೆ.

ಉಡುಪಿಯಲ್ಲಿ ನಡೆಯಲಿರುವ ಅಖಿಲ ಭಾರತ ಕಟ್ಟಡ ಕಾರ್ಮಿಕರ ಫೆಡರೇಶನ್(ಸಿಡ್ಲ್ಯುಎಫ್‌ಐ)ನ ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯ ಭಾಗವಾಗಿ ಗುರುವಾರ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಹಮ್ಮಿಕೊಳ್ಳಲಾದ ಕಾರ್ಮಿಕರ ಮೆರವಣಿ ಗೆಯ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಭಾರತದಲ್ಲಿ ಹಿಂದುಗಳು ಅಪಾಯದಲ್ಲಿದ್ದಾರೆಂದು ಆರ್‌ಎಸ್‌ಎಸ್ ಸುಳ್ಳು ಪ್ರಚಾರ ಮಾಡಿ, ಜನರನ್ನು ಭಯಭೀತರ ನ್ನಾಗಿಸಿ, ಅಲ್ಪಸಂಖ್ಯಾತರಿಗೆ ಬೆದರಿಕೆ ಯೊಡ್ಡುತ್ತಿದೆ. ಹಿಂದುತ್ವ ಅಜೆಂಡಾದ ಮೂಲಕ ಜನರನ್ನು ವಿಭಜಿಸುವ ಕಾರ್ಯ ಮಾಡಲಾಗುತ್ತಿದೆ. ನಾವು ಜನರ ಬಳಿಗೆ ತೆರಳಿ ನೈಜ್ಯತೆಯನ್ನು ಅರ್ಥ ಮಾಡಿಸುವ ಕಾರ್ಯ ಮಾಡಬೇಕಾಗಿದೆ. ಹಿಂದು ಧರ್ಮ ಬೇರೆ ಹಿಂದುತ್ವ ಬೇರೆ ಎಂಬುದಾಗಿ ಜನರಿಗೆ ತಿಳಿಸಬೇಕಾಗಿದೆ ಎಂದರು.

ಕೋಮು ಸಂಘಟನೆಗಳು ಧರ್ಮದ ಹೆಸರಿನಲ್ಲಿ ಕಾರ್ಮಿಕರನ್ನು ವಿಭಜಿಸುವ ಹುನ್ನಾರವನ್ನು ತಡೆಯಬೇಕಾಗಿದೆ. ಕಾರ್ಮಿಕರ ಸೌಲಭ್ಯಗಳನ್ನು ಸರಕಾರ ಹೆಚ್ಚಿಸ ಬೇಕು ಮತ್ತು ಕಾರ್ಮಿಕ ವಿರೋಧಿ ಧೋರಣೆಯನ್ನು ಸರಕಾರ ನಿಲ್ಲಿಸ ಬೇಕು. ಅಭಿವೃದ್ಧಿ ಹೆಸರಿನಲ್ಲಿ ಬಂಡವಾಳಶಾಹಿಗಳಿಗೆ ದೇಶದ ಸಂಪತ್ತು ಲೂಟಿ ಮಾಡಲು ಅವಕಾಶ ಮಾಡಿಕೊಡಲಾಗು ತ್ತಿದೆ ಎಂದು ಅವರು ದೂರಿದರು.

ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಮಹಿಳಾ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಸಮಾನ ವೇತನ ಸಿಗುತ್ತಿಲ್ಲ ಹಾಗೂ ಕಾಮಗಾರಿ ಸ್ಥಳದಲ್ಲಿ ಕುಡಿಯುವ ನೀರು, ಶೌಚಾಲಯ ಮತ್ತು ಲೈಂಗಿಕ ಕಿರುಕುಳದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಸಂಘಟನೆಯು ಮಹಿಳಾ ಕಟ್ಟಡ ಕಾರ್ಮಿಕರ ಉಪಸಮಿತಿಯನ್ನು ಅಖಿಲ ಭಾರತ ಮಟ್ಟದಲ್ಲಿ ರಚಿಸಿದ್ದು, ಮುಂದೆ ರಾಜ್ಯ ಹಾಗೂ ಜಿಲ್ಲಾಮಟ್ಟದಲ್ಲಿ ಆಗಬೇಕಾಗಿದೆ. ಈ ಮೂಲಕ ಮಹಿಳಾ ಕಟ್ಟಡ ಕಾರ್ಮಿಕರ ಸಮಸ್ಯೆ ಪರಿಹಾರಕ್ಕಾಗಿ ಹೋರಾಟ ಮಾಡಲಾಗು ವುದು ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಸಿಡಬ್ಲ್ಯುಎಫ್‌ಸಿ ಪ್ರಧಾನ ಕಾರ್ಯದರ್ಶಿ ಯು.ಪಿ. ಜೋಸೆಫ್, ಸಿಐಟಿಯು ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್, ಸಿಐಟಿಯು ಉಡುಪಿ ಜಿಲ್ಲಾಧ್ಯಕ್ಷ ಕೆ.ಶಂಕರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಶೇಖರ್ ಬಂಗೇರ ವಹಿಸಿದ್ದರು. ಕಾರ್ಯದರ್ಶಿ ಸಭಾಸ್ ನಾಯಕ್ ಸ್ವಾಗತಿಸಿದರು. ಇದಕ್ಕೂ ಮುನ್ನಾ ಉಡುಪಿ ನಗರದ ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯಿಂದ ಅಜ್ಜರಕಾಡುವರೆಗೆ ಕಾರ್ಮಿಕರ ಮೆರವಣಿಗೆ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News