ಪಕ್ಷಿಕೆರೆ ವಿಡಿಯೋ ಚಿತ್ರೀಕರಣದ ಬಗ್ಗೆ ಬಿಜೆಪಿ ಮೌನ: ವೇರೊನಿಕಾ ಕರ್ನೆಲಿಯೋ ಟೀಕೆ
ಉಡುಪಿ, ಆ.6: ಉಡುಪಿಯ ಪ್ರಕರಣವನ್ನು ರಾಷ್ಟ್ರವ್ಯಾಪಿ ಸುದ್ದಿಯಾಗುವಂತೆ ಪ್ರತಿಭಟಿಸಿದ ಬಿಜೆಪಿ ಹಾಗೂ ಸಂಘಪರಿವಾರದ ಮುಖಂಡರು ಮುಲ್ಕಿಯ ಪಕ್ಷಿಕೆರೆ ಎಂಬಲ್ಲಿ ಹಿಂದೂ ಮಹಿಳೆಯೊಬ್ಬರು ಬಚ್ಚಲು ಕೋಣೆಯಲ್ಲಿ ಸ್ನಾನ ಮಾಡುವುದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ ಪ್ರಕರಣದ ವಿಚಾರದಲ್ಲಿ ಯಾಕೆ ಮೌನ ವಹಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರೆ ವೇರೊನಿಕಾ ಕರ್ನೆಲಿಯೋ ಪ್ರಶ್ನಿಸಿದ್ದಾರೆ.
ಮಹಿಳೆಯನ್ನು ದೇವರೆಂದು ಪೂಜಿಸುವ ಬಿಜೆಪಿಗರಿಗೆ ಆಕೆಗೆ ಅವಮಾನ ಆದಾಗ ಆರೋಪಿಯ ಜಾತಿ ಧರ್ಮ ಮೊದಲು ನೋಡಿ ಮತ್ತೆ ಪ್ರತಿಭಟನೆ ಮಾಡುವುದು ಎನ್ನುವುದು ಇದರಲ್ಲಿ ಎದ್ದು ಕಾಣುತ್ತದೆ. ಮುಲ್ಕಿಯಲ್ಲಿ ಅವಮಾನಕ್ಕೆ ಒಳಗಾದ ಮಹಿಳೆ ಕೂಡ ಒಂದು ಹೆಣ್ಣು ಎಂಬುವುದು ಇವರಿಗೆ ತಿಳಿದಿಲ್ಲವೆ? ವಿಟ್ಲದಲ್ಲಿ ಅಮಾಯಕ ಅಪ್ರಾಪ್ತ ದಲಿತ ಬಾಲಕಿ ಮೇಲೆ ಕೂಡ ಸಂಘಟನೆಗೆ ಸೇರಿದ್ದಾರೆ ಎನ್ನುವ ಯುವಕರು ಅಮಾನುಷವಾಗಿ ಅತ್ಯಾಚಾರ ವೆಸಗಿದಾಗ ಕೂಡ ಬಿಜೆಪಿ ಹಾಗೂ ಸಂಘಪರಿವಾರದವರ ಬಾಯಿಗೆ ಬೀಗ ಬಿದ್ದಿರುವುದು ಇವರ ದ್ವಂದ್ವ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.