ನಕ್ಸಲ್ ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಹುಟ್ಟಿ ಬೆಳೆದ ಕೂಡ್ಲುವಿನ ಸ್ವಂತ ಜಾಗದಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ
ಉಡುಪಿ: ನಕ್ಸಲ್ ನಿಗ್ರಹ ಪಡೆಯ ಎನ್ ಕೌಂಟರ್ ಗೆ ಬಲಿಯಾದ ನಕ್ಸಲ್ ವಿಕ್ರಂ ಗೌಡ ಅವರ ಅಂತ್ಯಸಂಸ್ಕಾರವನ್ನು ಅವರು ಹುಟ್ಟಿ ಬೆಳೆದ ಹೆಬ್ರಿ ಸಮೀಪದ ಕೂಡ್ಲುವಿನ ಮನೆಯ ತೋಟದಲ್ಲಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಮಣಿಪಾಲ ಕೆಎಂಸಿಯ ಶವಗಾರದಲ್ಲಿ ರಾತ್ರಿ 12 ಗಂಟೆಗೆ ಆರಂಭವಾದ ಮರಣೋತ್ತರ ಪರೀಕ್ಷೆಯು ಬೆಳಗಿನ ಜಾವ ಐದು ಗಂಟೆಗೆ ಪೂರ್ಣಗೊಂಡಿತು. ಈ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ವಿಕ್ರಂ ಗೌಡ ಅವರ ಸಹೋದರ ಸುರೇಶ್ ಗೌಡ ಹಾಗೂ ತಂಗಿ ಸುಗುಣ ಸೇರಿದಂತೆ ಕುಟುಂಬಸ್ಥರು ಮಣಿಪಾಲ ಶವಾಗಾರಕ್ಕೆ ಆಗಮಿಸಿದ್ದು, ಮೃತದೇಹ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ.
ಕೂಡ್ಲುವಿನಲ್ಲಿ ವಿಕ್ರಂ ಗೌಡ ಅವರ ಮೂಲಮನೆ ಇದ್ದು, ಇದೀಗ ತಂಗಿ ಮೂಲ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಇಲ್ಲಿ ಯಾರೂ ವಾಸವಾಗಿಲ್ಲ. ತಂಗಿ ಮತ್ತು ತಮ್ಮ ಮನೆಯ ಆವರಣದಲ್ಲಿ ಅಂತ್ಯ ಸಂಸ್ಕಾರ ಮಾಡಲು ನಿರ್ಧಾರ ಮಾಡಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವಿಕ್ರಂ ಗೌಡ ಅವರ ತಂಗಿ ಸುಗುಣ, ನನ್ನ ಅಣ್ಣನನ್ನು ಅನಾಥ ಶವವಾಗಿ ಸುಡುವುದು ಬೇಡ. ಕೂಡ್ಲುವಿನಲ್ಲಿ ಅಣ್ಣನಿಗೆ ಸೇರಿದ ಒಂದು ಎಕ್ರೆ ಭೂಮಿ ಇದ್ದು ಆ ಸ್ಥಳದಲ್ಲಿಯೇ ಅಂತ್ಯಸಂಸ್ಕಾರ ಮಾಡುತ್ತೇವೆ. ಅಣ್ಣ ಹುಟ್ಟಿ ಬೆಳೆದ ಜಾಗದಲ್ಲೇ ಅಂತ್ಯ ಸಂಸ್ಕಾರ ಮಾಡಲು ನಾವು ಈಗಾಗಲೇ ನಿರ್ಧರಿಸಿದ್ದೇವೆ ಎಂದರು.